ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳು ಒಂದು ವಾರಗಳ ಕಾಲ ಮುಂದೂಡಿಕೆಯಾಗಿದ್ದು, ಮಾರ್ಚ್ 9ರಿಂದ ಪರೀಕ್ಷೆಗಳು ಆರಂಭವಾಗಲಿವೆ.
ಉತ್ತರಪ್ರದೇಶ, ಗೋವಾ, ಉತ್ತರಾಖಂಡ್, ರಾಜಸ್ಥಾನ ಹಾಗೂ ಮಣಿಪುರ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮಾರ್ಚ್ 9ರಿಂದ ಏಪ್ರಿಲ್ 29ರವರೆಗೆ ಪರೀಕ್ಷೆಗಳು ನಡೆಯಲಿವೆ.
ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಪರೀಕ್ಷೆಗಳು ಆರಂಭವಾಗುತ್ತಿದ್ದವು. ಆದರೆ, ಈ ವರ್ಷ ಪಂಚ ರಾಜ್ಯಗಳ ಚುನಾವಣೆ ಇರುವುದರಿಂದ ಮಾರ್ಚ್ 9ರಿಂದ ಪರೀಕ್ಷೆಗಳು ನಡೆಯಲಿವೆ ಎಂದು ಸಿಬಿಎಸ್‌ಇ ಅಧ್ಯಕ್ಷ ಆರ್.ಕೆ. ಚತುರ್ವೇದಿ ಅವರು ತಿಳಿಸಿದ್ದಾರೆ.
ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬ ಮಾಡುವುದಿಲ್ಲ. ಪರೀಕ್ಷಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುವುದು ಎಂದು ಚತುರ್ವೇದಿ ಹೇಳಿದ್ದಾರೆ.