ನವದೆಹಲಿ: ಅತ್ತ ಚುನಾವಣಾ ಆಯೋಗದ ಮುಂದೆ ಮುಲಾಯಂ ಸಿಂಗ್ ಬಣ ಹಾಗೂ ಅಖಿಲೇಶ್ ಯಾದವ್ ಬಣ ಸೈಕಲ್ ಗುರುತಿಗಾಗಿ ಹಗ್ಗಜಗ್ಗಾಟ ನಡೆಸುತ್ತಿರುವಂತೆಯೇ ಇತ್ತ ಪಕ್ಷದ ರಾಷ್ಟ್ರಾಧ್ಯಕ್ಷರೂ ಕೂಡ ಆಗಿರುವ ಮುಲಾಯಂ ಸಿಂಗ್ ಯಾದವ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಂಡಾಯ ಶಮನದತ್ತ ಮುಲಾಯಂ ಸಿಂಗ್ ಯಾದವ್ ಚಿತ್ತ ನೆಟ್ಟಿದ್ದು, ನಿನ್ನೆ ಪಕ್ಷದ ಕಾರ್ಯಕ್ರಮದಲ್ಲಿ ಪುತ್ರ ಅಖಿಲೇಶ್ ಯಾದವ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವ ಮೂಲಕ ಅಖಿಲೇಶ್ ಯಾದವ್ ಬಣವನ್ನು ಸಂತೈಸುವ ಪ್ರಯತ್ನ ಮಾಡಿದರು. "ತಮ್ಮ ಪುತ್ರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ತಮಗೆ ಯಾವುದೇ ಜಗಳವೂ ಇಲ್ಲ ಮತ್ತು ಕೆಲ ವಿಚಾರಗಳಲ್ಲಿ ಗೊಂದಲಗಿಳಿದ್ದು, ಶೀಘ್ರವೇ ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದರು.
ಚಿಹ್ನೆಗಾಗಿ ಮುಂದುವರೆದ ಹಗ್ಗ ಜಗ್ಗಾಟ
ಇನ್ನು ಅಖಿಲೇಶ್ ಬಣ ಹಾಗೂ ಮುಲಾಯಂ ಸಿಂಗ್ ಯಾದವ್ ಬಣಗಳು ಪಕ್ಷದ ಚಿಹ್ನೆಗಾಗಿ ಕಸರತ್ತು ಮುಂದುವರೆಸಿದ್ದು, 25 ವರ್ಷಗಳ ಹಿಂದೆ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದಾಗ ಪಡೆದುಕೊಳ್ಳಲಾಗಿದ್ದ ‘ಸೈಕಲ್’ ಚಿಹ್ನೆಯ ಪ್ರತಿಪಾದನೆ ಸಲುವಾಗಿ ದೆಹಲಿಯಲ್ಲಿ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದೆ ಎಂದು ಹೇಳಿದ ಮುಲಾಯಂ ಹೇಳಿದ್ದಾರೆ. ಅಂತೆಯೇ ಅಖಿಲೇಶ್ ಯಾದವ್ ಅವರು ತಾವೇ ಪಕ್ಷದ ಮುಖ್ಯಸ್ಥ ಹಾಗೂ ಸೈಕಲ್ ಚಿಹ್ನೆ ತಮಗೆ ಸೇರಿದ್ದು ಎಂಬುದಾಗಿಯೂ ತಮಗೆ 200-229ಕ್ಕೂ ಹೆಚ್ಚು ಮಂದಿ ಎಸ್ಪಿ ಶಾಸಕರ ಬೆಂಬಲ ತಮಗಿದೆ ಎಂದು ಪ್ರತಿಪಾದಿಸಿದ್ದಾರೆ. ಉಭಯ ಬಣಗಳ ಅಹವಾಲು ಆಲಿಸಿರುವ ಚುನಾವಣಾ ಆಯೋಗವು ಅಹವಾಲುಗಳು ತೃಪ್ತಿಕರವಾಗದೇ ಇದ್ದಲ್ಲಿ ಸೈಕಲ್ ಚಿಹ್ನೆಯನ್ನು ಸ್ಥಗಿತಗೊಳಿಸಬಹುದು ಎಂದು ಹೇಳಲಾಗುತ್ತಿದೆ.