ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ತಾಯಿಯವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿಯವರು ತಾಯಿಯನ್ನು ತಮ್ಮ ನಿವಾಸದಲ್ಲಿಯೇ ಇರಿಸಿಕೊಂಡು ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನಾನು ನನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದೇನೆ. ಅವರ ಆಶೀರ್ವಾದ ಪ್ರತಿದಿನ ಪಡೆಯುತ್ತೇನೆ, ಆದರೆ ಅದನ್ನು ಇಡೀ ಜಗತ್ತಿಗೆ ಹೇಳಿಕೊಂಡು ತಿರುಗಾಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ನನ್ನ ತಾಯಿಯನ್ನು ಸರದಿಯಲ್ಲಿ ನಿಲ್ಲಿಸುವುದಿಲ್ಲ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇಂದು ನರೇಂದ್ರ ಮೋದಿಯವರು ಗುಜರಾತ್ ನ ಗಾಂಧಿನಗರದಲ್ಲಿ ತಮ್ಮ ತಾಯಿಯವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿಯವರು ತಮ್ಮ ನಿವಾಸದಲ್ಲಿ ತಾಯಿಯವರನ್ನು ನೋಡಿಕೊಂಡರೆ ಅದುವೇ ಅವರು ಕೊಡುವ ಅತಿದೊಡ್ಡ ಗೌರವ. ಹಿಂದೂ ಧರ್ಮದಲ್ಲಿ ವ್ಯಕ್ತಿ ತನ್ನ ತಾಯಿ ಮತ್ತು ಪತ್ನಿಯನ್ನು ತನ್ನ ಜೊತೆ ಇಟ್ಟುಕೊಳ್ಳಬೇಕು. ಪ್ರಧಾನಿಯವರ ನಿವಾಸ ದೊಡ್ಡದಾಗಿದೆ. ಆದರೆ ಮನಸ್ಸು ಚಿಕ್ಕದಾಗಿದೆ ಎಂದು ತೀಕ್ಷ್ಣವಾಗಿ ಟ್ವೀಟ್ ಮಾಡಿದ್ದಾರೆ.