ನವದೆಹಲಿ: ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಸೇನೆಯಲ್ಲಿ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದು ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಸಿಆರ್ಪಿಎಫ್ ಯೋಧ ಜೀತ್ ಸಿಂಗ್ ಎಂಬುವರು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಮಥುರಾ ನಿವಾಸಿ ಜೀತ್ ಸಿಂಗ್ ಅವರು ತಮ್ಮ ವಿಡಿಯೋದಲ್ಲಿ ಗೆಳೆಯರೇ ನಾನು ಕಾನ್ಸ್ಟೇಬಲ್ ಜೀತ್ ಸಿಂಗ್ ನಾನೊಬ್ಬ ಸಿಆರ್ಪಿಎಫ್ ಯೋಧ, ನಾನು ನಿಮ್ಮ ಮೂಲಕ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶವೊಂದನ್ನು ತಲುಪಿಸಬೇಕೆಂದಿರುವೆ. ನೀವು ನನಗೆ ನೀಡುತ್ತೀರಿ ಎಂದು ಸಂಪೂರ್ಣವಾಗಿ ನಂಬಿದ್ದೇನೆ. ನಾವು ಸಿಆರ್ಪಿಎಫ್ ಸಿಬ್ಬಂದಿ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತೇವೆ. ಲೋಕಸಭೆ, ರಾಜ್ಯಸಭೆ, ವಿಐಪಿ ಮತ್ತು ವಿವಿಐಪಿ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತೇವೆ ಆದರೆ ನವಗೆ ಯಾವುದೇ ಸೌಲಭ್ಯಗಳು ಇಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಅದೆಷ್ಟು ಶಾಲೆ ಹಾಗೂ ಕಾಲೇಜುಗಳಿವೆ ಗೊತ್ತಿಲ್ಲ. ಆದರೆ ಅಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ತಿಂಗಳಿಗೆ ಹೆಚ್ಚು ವೇತನ, ಹಬ್ಬಹರಿದಿನಗಳಲ್ಲಿ ರಜೆ ನೀಡಲಾಗುತ್ತದೆ. ಅವರು ಹಬ್ಬದ ಸಂದರ್ಭದಲ್ಲಿ ಕುಟುಂಬದ ಜತೆ ಕಾಲ ಕಳೆಯುತ್ತಾರೆ. ಆದರೆ ಹಬ್ಬದ ದಿನಗಳಲ್ಲಿ ನಾವು ಅರಣ್ಯ ಪ್ರದೇಶ, ಹಳ್ಳಿಗಾಡಿನಲ್ಲಿ ಬಿದ್ದುಕೊಂಡಿರುತ್ತೇವೆ. ನಮಗೆ ಯಾವುದೇ ಸವಲತ್ತು, ರಜೆ ಏನು ಸಿಗುವುದಿಲ್ಲ. ನಮ್ಮ ಕಷ್ಟ ಅರ್ಥೈಸಿಕೊಳ್ಳುವವರು ಯಾರು ಇಲ್ಲ ಗೆಳೆಯರೇ ಎಂದು ಹೇಳಿದ್ದಾರೆ.