ನವದೆಹಲಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸಮಾಜದಲ್ಲಿ ಒಡುಕುಂಟು ಮಾಡುವ ರಾಜಕೀಯವನ್ನು ಪೋಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಕ್ಷಿ ಮಹಾರಾಜ್ ಜೊತೆ ನಾನು ಎರಡು ಸಂದರ್ಭಗಳಲ್ಲಿ ಹೋರಾಟ ನಡೆಸಿದ್ದೇನೆ. ರಾಜಕೀಯ ಎಂದರೆ ಏನು ಎಂಬುದು ನನಗೆ ತಿಳಿದಿದೆ, ವ್ಯಕ್ತಿತ್ವ ಎಂದರೆ ಏನು ಎಂಬುದರ ಬಗ್ಗೆ ನನಗೆ ಅರಿವಿದೆ, ಸಮಾಜವನ್ನು ಒಡೆಯುವ ರಾಜಕೀಯ ಪೋಷಣೆ ಮಾಡುವುದನ್ನು ನಾನು ದ್ವೇಷಿಸುತ್ತೇನೆ ಎಂದು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ದ್ವೇಷ ರಾಜಕೀಯ, ಮತ್ತೊಬ್ಬರನ್ನು ಟೀಕಿಸುತ್ತಾ ರಾಜಕೀಯ ಮಾಡಿ ಮುಂದೆ ಬಂದು ಈಗ ಅವರು ಸರ್ಕಾರದ ಅಂಗವಾಗಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ಆರೋಪಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ ತಮ್ಮ ಪ್ರತಿಕ್ರಿಯೆ ನೀಡುವಂತೆ ಸಾಕ್ಷಿ ಮಹಾರಾಜ್ ಗೆ ಸೂಚಿಸಿರುವ ಆಯೋಗ, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂಥಹ ಹೇಳಿಕೆಗಳನ್ನು ಜನರು ವಿರೋಧಿಸಬೇಕು ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಸಮಯದಲ್ಲೂ ನಾನು ಚುನಾವಣಾ ಆಯೋಗವನ್ನು ಹೊಗಳುವುದಿಲ್ಲ, ಆದರೆ ಈ ಸಮಯದಲ್ಲಿ ಆಯೋಗ ಕೈಗೊಂಡಿರುವ ನಿರ್ಣಯ ಪ್ರಶಂಸನಾರ್ಹ ಎಂದು ಹೇಳಿದ್ದಾರೆ. ಇದು ಯುದ್ಧದ ಆರಂಭ, ದೇಶವನ್ನು ಇಂಥಹ ರಾಜಕರಾಣಿಗಳಿಂದ ದೂರವಿಡಲು ನಾವು ಮನಸ್ಸು ಬದಲಿಸಬೇಕು, ಅದಕ್ಕಾಗಿ ನಾವು ತುಂಬಾ ದೂರ ಸಾಗಬೇಕಿದೆ ಎಂದು ಸಲ್ಮಾನ್ ಖುರ್ಷಿದ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಸಾಕ್ಷಿ ಮಹಾರಾಜ್ ವಿರುದ್ಧ ಬಿಎಸ್ ಪಿ ಕೂಡ ಹರಿಹಾಯ್ದಿದೆ. ರಾಜಕೀಯ ಮಿಶ್ರಿತ ಧರ್ಮಾಧಾರಿತ ಧ್ರುವೀಕರಣ ಮಾಡಲು ಬಿಜೆಪಿ ಈ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡು ಬಂದಿದೆ ಎಂದು ಬಿಎಸ್ಪಿ ಸದಸ್ಯ ಸುಧೀಂದ್ರ ಬೊಡಾರಿಯಾ ಟೀಕಿಸಿದ್ದಾರೆ.