ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿದರೆ ಮಾತ್ರ 2017 ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂತರು ಬೆಂಬಲ ನೀಡುತ್ತಾರೆ ಎಂದು ರಾಮಜನ್ಮಭೂಮಿ- ಬಾಬ್ರಿ ಮಸೀದಿ ಇರುವ ಪ್ರದೇಶದ ಮಂದಿರದ ಅರ್ಚಕರು ಹೇಳಿದ್ದಾರೆ.
ಮಹಾಂತ್ ಹಾಗೂ ಸಾಧುಗಳು ರಾಮನಲ್ಲಿ ನಂಬಿಕೆ ಇಟ್ಟಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಅವರ ಏಕೈಕ ಕೋರಿಕೆಯಾಗಿದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಈಗಲಾದರೂ ರಾಮಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸವಿತ್ತು. ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಅಗತ್ಯವಾಗಿ ಭೇಟಿ ನೀಡಿ ಅವರ ಅವಧಿಯಲ್ಲೇ ರಾಮಮಂದಿರ ನಿರ್ಮಾಣ ಆಗುವುದೆಂಬ ಭರವಸೆ ನೀಡಬೇಕು ಎಂದು ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರೆ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಸಾಧು ಸಂತರಿಂದ ಬೆಂಬಲ ದೊರೆಯಲಿದೆ, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸತ್ಯೇಂದ್ರ ದಾಸ್ ಹೇಳಿದ್ದಾರೆ.