ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್
ಲಕ್ನೋ: ಉತ್ತರ ಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮಹಾ ಮೈತ್ರಿ ಏರ್ಪಡುವ ಸಾಧ್ಯತೆಗಳ ಎಲ್ಲಾ ಊಹಾಪೋಹಗಳಿಗೆ ಕಾಂಗ್ರೆಸ್ ತೆರೆ ಎಳೆದಿದೆ.
ಕಾಂಗ್ರೆಸ್ ಪಕ್ಷ ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದ್ದು, ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯದ ಚುನಾವಣೆ ಉಸ್ತುವಾರಿ ವಹಿಸಿರುವ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈ ಕುರಿತ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.
ತಮ್ಮ ಪಕ್ಷ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ತಾವು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದಿಂದ ಹಿಂದೆ ಸರಿಯುವುದಾಗಿ ಶೀಲಾ ದೀಕ್ಷಿತ್ ಹೇಳಿಕೆ ನೀಡಿರುವ ಬೆನ್ನಲ್ಲೇ ಗುಲಾಂ ನಬಿ ಆಜಾದ್ ಹೇಳಿಕೆ ನೀಡಿದ್ದು ಮೈತ್ರಿಯ ನಿಚ್ಛಳದ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಇಂದು ಬೆಳಗ್ಗೆ ಲಕ್ನೋದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಪಕ್ಷದ ಜೊತೆಗಿನ ಹೊಂದಾಣಿಕೆ ಬಗ್ಗೆ ಇನ್ನು ಒಂದೆರಡು ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಧ್ಯಕ್ಷನನ್ನಾಗಿ ತಮ್ಮನ್ನು ಗುರುತಿಸಿ ಸೈಕಲ್ ಗುರುತನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅವರ ಅತ್ಯಂತ ನಿಕಟವರ್ತಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್, ಮುಂಬರುವ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಎದುರಿಸುವ ಆಶಾವಾದ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಂತಿಮ ನಿರ್ಧಾರ ಅಖಿಲೇಶ್ ಅವರು ತೆಗೆದುಕೊಳ್ಳಲಿದ್ದು, ಅದು ನೆರವೇರುವ ಸಾಧ್ಯತೆಯಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಅಖಿಲೇಶ್ ಯಾದವ್ ರ ಸಮಾಜವಾದಿ ಪಕ್ಷ ಬಹುಮತ ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಮೈತ್ರಿ ಹಾಗೂ ಅಜಿತ್ ಸಿಂಗ್ ನೇತೃತ್ವದ ಆರ್ ಎಲ್ ಡಿ ಪಕ್ಷವನ್ನು ಕಿರಿಯ ಮೈತ್ರಿ ಪಕ್ಷವನ್ನಾಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics