ದೇಶ

ಪಂಚ ರಾಜ್ಯಗಳ ಚುನಾವಣೆ: ಸುಮಾರು 65 ಕೋಟಿ ರೂ. ನಗದು, ಮದ್ಯ, ಮಾದಕ ವಸ್ತು ವಶ

Sumana Upadhyaya
ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳಲ್ಲಿ ಚುನಾವಣಾ ಪೂರ್ವ ಚಟುವಟಿಕೆಗಳು ಕಾವೇರುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಐದು ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಗಳಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಬುರುಸಿನ ಪ್ರಚಾರ ಕಾರ್ಯ ನಡೆಯುತ್ತಿದ್ದು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ನಿನ್ನೆಯವರೆಗೆ 5 ರಾಜ್ಯಗಳಲ್ಲಿ 64.38 ಕೋಟಿ ನಗದು, 6.23 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಮದ್ಯ ಮತ್ತು 2 ಕೋಟಿ ರೂಪಾಯಿಗೂ ಅಧಿಕ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗ ನೇಮಿಸಿರುವ ಕಣ್ಗಾವಲು ಮತ್ತು ವೆಚ್ಚದ ಮೇಲ್ವಿಚಾರಣೆ ತಂಡಗಳು 64 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿವೆ. ಅದರಲ್ಲಿ ಉತ್ತರ ಪ್ರದೇಶವೊಂದರಲ್ಲಿಯೇ 56.04 ಕೋಟಿ ರೂಪಾಯಿ, ಮದ್ಯ ಮತ್ತು 8 ಕೋಟಿ ರೂಪಾಯಿಗೂ ಅಧಿಕ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. 

ಅಧಿಕೃತ ಅಂಕಿಅಂಶಗಳ ಪ್ರಕಾರ, ಪಂಜಾಬ್ ನಲ್ಲಿ ಅತಿ ಹೆಚ್ಚು 1.78 ಕೋಟಿ ರೂಪಾಯಿ ಮಾದಕ ವಸ್ತು ವಶಪಡಿಸಿಕೊಂಡಿದ್ದರೆ ನಂತರ ಗೋವಾದಲ್ಲಿ 16.72 ಲಕ್ಷ ಮತ್ತು ಮಣಿಪುರದಲ್ಲಿ 7 ಲಕ್ಷ ರೂಪಾಯಿ ಬೆಲೆಬಾಳುವ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದಲ್ಲಿ 6.06 ಕೋಟಿ ಬೆಲೆಬಾಳುವ 1.98 ಲಕ್ಷ ಲೀಟರ್ ಲಿಕ್ಕರ್, 10,646 ಲೀಟರ್ ಸ್ಪಿರಿಟ್ ನ್ನು ಪಂಜಾಬ್ ನಿಂದ ವಶಪಡಿಸಿಕೊಳ್ಳಲಾಗಿದೆ.

ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಕಂಡುಕೊಂಡಿರುವ ಅಡ್ಡದಾರಿಗಳನ್ನು ಮಟ್ಟಹಾಕಲು ಚುನಾವಣಾ ಆಯೋಗ ಮುಂದಾಗಿದೆ. ಕಪ್ಪು ಹಣ ಮತ್ತು ಅಕ್ರಮವಾಗಿ ಮತದಾರರಿಗೆ ಲಂಚ ಕೊಡುವುದನ್ನು ತಪ್ಪಿಸಲು ಚುನಾವಣಾ ಆಯೋಗ 200 ಚುನಾವಣಾ ವೆಚ್ಚ ವೀಕ್ಷಕರು ಮತ್ತು ಕೇಂದ್ರೀಯ ವೀಕ್ಷಕರನ್ನು ನೇಮಿಸಿದೆ.

ಫೆಬ್ರವರಿ 4ರಿಂದ ಮಾರ್ಚ್ 8ರವರೆಗೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 11ರಂದು ಮತ ಎಣಿಕೆ ನಡೆಯಲಿದೆ.
SCROLL FOR NEXT