ದೇಶ

ದಂಗಲ್ ನಟಿ ಜೈರಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ವೆಂಕಯ್ಯ ನಾಯ್ಡು

Manjula VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿ ಮಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ದಂಗಲ್ ನಟಿ ಜೈರಾ ವಾಸೀಂ ಅವರಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಬುಧವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ತನ್ನ ಸ್ವಂತ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾದ ಕಾರಣಕ್ಕೆ ಜೈರಾ ಏಕೆ ಕ್ಷಮೆಯಾಚಿಸಬೇಕು? ಈಗೇಕೆ ಎಲ್ಲರೂ ಮೌನವಾಗಿದ್ದಾರೆ?...ಎಂದು ಪ್ರಶ್ನಿಸಿದ್ದಾರೆ.

ಸುಳ್ಳು-ಪ್ರಗತಿಪರರು ಪರಿಸ್ಥಿತಿಗೆ ತಕ್ಕಂತೆ ಹೇಗೆ ವರ್ತಿಸುತ್ತಾರೆ, ಪರಿಸ್ಥಿತೆ ತಕ್ಕಂತೆ ಅವರ ತಮ್ಮ ನಡವಳಿಕೆಗಳನ್ನು ಹೇಗೆ ಬದಲಿಸಿಕೊಳ್ಳುತ್ತಾರೆಂಬುದನ್ನು ಜೈರಾ ತನ್ನ ಪಾತ್ರದ ಮೂಲಕ ತೋರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರತಿಭಾವಂತ ನಟಿ ಮಾಡಿದ್ದ ತಪ್ಪಾದರೂ ಏನು...ಎಂದು ಕೇಳಿದ್ದಾರೆ.

ದಂಗಲ್ ಚಿತ್ರ ಯಶಸ್ಸು ಕಂಡ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಜೈರಾ ಅವರು ಕೆಲ ದಿನಗಳ ಹಿಂದಷ್ಟೇ ಭೇಟಿಯಾಗಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಕೆಲವರು ಜೈರಾ ಅವರು ಕ್ಷಮೆಯಾಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಜೈರಾ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬೆಂಬಲ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಜೈರಾ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಇದೂ ಕೂಡ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ನಿನ್ನೆಯಷ್ಟೇ ಬಾಲಿವುಡ್ ನಟ ಅಮಿರ್ ಖಾನ್ ಅವರು ಜೈರಾಗೆ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಜೈರಾ ಹೇಳಿಕೆಯನ್ನು ನಾನು ಓದಿದೆ. ಆಕೆ ಈ ರೀತಿಯಾಗಿ ಹೇಳಿಕೆ ನೀಡಿದ್ದಾಳೆಂದರೆ ಆಕೆಯ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಊಹೆ ಮಾಡಿಕೊಳ್ಳಬಲ್ಲೆ. ಜೈರಾ ನಾನು ನಿನಗೆ ಹೇಳಬಯಸುವುದೇನೆಂದರೆ ನಾವೆಲ್ಲರೂ ನಿನ್ನೊಂದಿಗಿದ್ದೇವೆ ಎಂದು ಹೇಳಿದ್ದರು.

SCROLL FOR NEXT