ದೇಶ

ಅಖಿಲೇಶ್ ಯಾದವ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಶಿವಪಾಲ್ ಯಾದವ್

Lingaraj Badiger
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನೂತನ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶುಕ್ರವಾರ ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಿತಶತ್ರು ಚಿಕ್ಕಪ್ಪ ಹಾಗೂ ವಿವಾದಾತ್ಮಕ ಸಚಿವ ಅಜಂ ಖಾನ್ ಅವರು ಸ್ಥಾನ ಪಡೆದಿದ್ದಾರೆ.
ಫೆಬ್ರವರಿ 11ರಿಂದ ನಡೆಯುವ ಮೊದಲ ಮೂರು ಹಂತದ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಪಕ್ಷ ಇಂದು 191 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಶಿವಪಾಲ್ ಯಾದವ್ ಅವರು ಜಸ್ವಂತ್ ನಗರದಿಂದ ಹಾಗೂ ಅಜಂ ಖಾನ್ ಅವರು ತಮ್ಮ ಸಾಂಪ್ರದಾಯಿಕ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ರಾಜ್ಯಸಭಾ ಸದಸ್ಯ ಬೆನಿ ಪ್ರಸಾದ್ ವರ್ಮಾ ಅವರ ಪುತ್ರ ರಾಕೇಶ್ ವರ್ಮಾ ಸಹ ಅಖಿಲೇಶ್ ಯಾದವ್ ಅವರ ಮೊದಲ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವರ್ಮಾ ಈ ಮುಂಚೆ ಶಿವಪಾಲ್ ಯಾದವ್ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.
ಈ ಮುಂಚೆ ಮುಲಾಯಂ ಸಿಂಗ್ ಯಾದವ್ ಅವರು ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಕೈಬಿಡಲಾಗಿದ್ದ ಅಖಿಲೇಶ್ ಯಾದವ್ ಅವರ ಹಲವು ಬೆಂಬಲಿಗರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಮತ್ತೊಂದು ವಿಶೇಷ. ಇನ್ನು ಮೊದಲ ಪಟ್ಟಿಯಲ್ಲಿ ಶಿವಪಾಲ್ ಯಾದವ್ ಅವರಿಗೆ ಸ್ಥಾನ ನೀಡುವ ಮೂಲಕ ಅಖಿಲೇಶ್ ಯಾದವ್ ಅವರು ತಂದೆ-ಮಗ ಮತ್ತೆ ಒಂದಾಗುವ ಸೂಚನೆ ನೀಡಿದ್ದಾರೆ.
SCROLL FOR NEXT