ನವದೆಹಲಿ: ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಲಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟರಾರ್ತಿಯೊಬ್ಬರು ಶನಿವಾರ ಹೇಳಿದ್ದಾರೆ.
ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿರುವ ಕುರಿತಂತೆ ತಮಿಳುನಾಡಿನ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರೀಯ ಸ್ಥಾನವಾಗಿರುವ ಮರೀನಾ ಬೀಚ್ ಬಳಿ ಲಕ್ಷಾಂತರ ಜನರು ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.
ತಮಿಳುನಾಡು ಜನತೆಯ ಪ್ರತಿಭಟನೆಗೆ ಕೊನೆಗೂ ಮಣಿದಿದ್ದ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿತ್ತು. ಅಟರ್ನಿ ಜನರಲ್ ಮುಕುಲ್ ರೋಹ್ಟಗಿ ಸಲಹೆ ನಂತರ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯ ಕರಡು ಪ್ರತಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಕಾನೂನು ಸಚಿವಾಲಯ ಅನುಮೋದನೆ ನೀಡಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಗೌರಿ ಮೌಲೇಖಿ ಅವರು, ಯಾವುದೇ ರೀತಿಯ ಸುಗ್ರೀವಾಜ್ಞೆಯಾಗಲೀ ಅಥವಾ ಶಾಸನಗಳಾದರೂ ಬರಲಿ, ಎಲ್ಲವೂ ಸುಪ್ರೀಂಕೋರ್ಟ್ ನ ಅಂಗಳಕ್ಕೆ ಬರಲೇಬೇಕಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಈ ಸುಗ್ರೀವಾಜ್ಞೆ ಕೂಡ ಸುಪ್ರೀಂಕೋರ್ಟ್ ನ ಅಂಗಳದಲ್ಲಿಯೇ ಇದ್ದು, ಸುಗ್ರೀವಾಜ್ಞೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮಿಳುನಾಡಿನಲ್ಲಿ ಮುಂದುವರೆಯುತ್ತಿರುವ ಪ್ರತಿಭಟನೆ ವಿರುದ್ಧ ಕಿಡಿಕಾಡಿರುವ ಅವರು, ಈ ರೀತಿಯ ಘಟನೆಗಳಿಂದಾಗಿ ಸುಪ್ರೀಂಕೋರ್ಟ್ ಹಾಗೂ ದೇಶ ತಲೆತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಂಡರೂ ಅದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅವಮಾನ ಮಾಡಿದಂತಾಗುತ್ತದೆ. ಇದೇ ರೀತಿಯಾಗಿ ಇತರೆ ರಾಜ್ಯಗಳಲ್ಲೂ ಆದರೆ, ಅವುಗಳನ್ನು ನಿಯಂತ್ರಿಸುವವರು ಯಾರು. ಈ ರೀತಿಯ ಬೆಳವಣಿಗೆಗಳು ಕೆಟ್ಟ ಪೂರ್ವನಿದರ್ಶನಗಳನ್ನು ಸೃಷ್ಟಿ ಮಾಡಲಿದೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗಳಿಂದಾಗಿ ದೇಶ ತಲೆತಗ್ಗಿಸುವಂದಾಗಿದೆ. ಸಂವಿಧಾನ ಹಾಗೂ ಸುಪ್ರೀಂಕೋರ್ಟ್'ನ್ನು ಎತ್ತಿಹಿಡಿಯಲು ದೇಶದ ಜನತೆ ಇದೀಗ ಒಗ್ಗೂಡಿ ಕೈಜೋಡಿಸಬೇಕಿದೆ ಎಂದು ತಿಳಿಸಿದ್ದಾರೆ.