ಉ.ಪ್ರದೇಶ ಚುನಾವಣೆ: ಕಾಂಗ್ರೆಸ್ ಗೆ 99 ಸೀಟ್ ಗಳ ಆಫರ್ ನೀಡಿದ ಅಖಿಲೇಶ್ ಯಾದವ್
ಸೀಟು ಹಂಚಿಕೆಗೆ ಸಂಬಂಧಿಸದಂತೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ಗುದ್ದಾಟ ಮುಂದುವರೆದಿದ್ದು, ಮುಂದಿನ ತಿಂಗಳು...
ಲಖನೌ: ಸೀಟು ಹಂಚಿಕೆಗೆ ಸಂಬಂಧಿಸದಂತೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ಗುದ್ದಾಟ ಮುಂದುವರೆದಿದ್ದು, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಕಾಂಗ್ರೆಸ್ ಗೆ 99 ಸೀಟ್ ಗಳ ಆಫರ್ ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರು ಲಖನೌ ನಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ವಿಶೇಷ ರಾಯಭಾರಿ ಪ್ರಿಯಾಂಕ ಗಾಂಧಿ ವಾದ್ರಾ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ಆಫರ್ ನೀಡಿದ್ದಾರೆ.
ಈ ಮಧ್ಯೆ ಸಮಾಜವಾದಿ ಪಕ್ಷದ 99 ಸೀಟ್ ಗಳ ಆಫರ್ ಅನ್ನು ಒಪ್ಪಿಕೊಂಡಿರುವ ಬಗ್ಗೆ ಅಥವಾ ತಿರಸ್ಕರಿಸಿರುವ ಬಗ್ಗೆ ಕಾಂಗ್ರೆಸ್ ನಿಂದ ಇದುವರೆಗೂ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸಬಹುದು ಎಂದು ಭಾವಿಸಲಾಗಿದ್ದ ಸಮಾಜವಾದಿ ಪಕ್ಷ- ಕಾಂಗ್ರೆಸ್ ಮೈತ್ರಿ ಮತ್ತೆ ಬಿಕ್ಕಟ್ಟಿನಲ್ಲಿ ಸಿಲುಕಿದೆ.
ಅಖಿಲೇಶ್ ಯಾದವ್ ಅವರು ಈಗಾಗಲೇ ಕಾಂಗ್ರೆಸ್ ವಶದಲ್ಲಿರುವ ಸ್ಥಾನಗಳು ಸೇರಿದಂತೆ 210 ಸ್ಥಾನಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೊಷಿಸಿರುವುದರಿಂದ ಸೀಟು ಹಂಚಿಕೆಯ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.