ದೇಶ

4 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ ಪ್ರಣವ್‌ ಮುಖರ್ಜಿ

Lingaraj Badiger
ನವದೆಹಲಿ: ಬಿಹಾರದಲ್ಲಿ 34 ಜನರನ್ನು ಹತ್ಯೆ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಭಾನುವಾರ ಆದೇಶ ಹೊರಡಿಸಿದ್ದಾರೆ.
1992ರಲ್ಲಿ ಮೇಲ್ವರ್ಗದ 34 ಜನರನ್ನು ಹತ್ಯೆ ಮಾಡಿದ್ದ ಕೃಷ್ಣ ಮೋಚಿ, ನನ್ಹೇಲಾಲ್‌ ಮೋಚಿ, ಬಿರ್‌ ಕೌರ್‌ ಪಾಸ್ವಾನ್‌ ಹಾಗೂ ಧರ್ಮೇಂದ್ರ ಸಿಂಗ್‌ ಅವರಿಗೆ ರಾಷ್ಟ್ರಪತಿಗಳು ಜೀವದಾನ ಮಾಡಿದ್ದಾರೆ. 
ಬಿಹಾರ ಸರ್ಕಾರದ ಶಿಫಾರಸಿನ ಅನ್ವಯ ಕ್ಷಮೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು 2016ರ ಆಗಸ್ಟ್‌ 8ರಂದು ಕೇಂದ್ರ ಗೃಹ ಸಚಿವಾಲಯವ ತಿರಸ್ಕರಿಸಿತ್ತು. ಆದರೆ ದಯಾ ಮನವಿಯನ್ನು ಪರಿಗಣಿಸುವಲ್ಲಿ ರಾಜ್ಯ ಸರ್ಕಾರ ಮಾಡಿರುವ ವಿಳಂಬ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪರಿಶೀಲನೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪರಿಗಣಿಸಿದ್ದಾರೆ. ಈ ಮೂಲಕ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದಾರೆ.
ಶಿಕ್ಷೆ ಅನುಭವಿಸುತ್ತಿದ್ದ ನಾಲ್ಕೂ ಕೈದಿಗಳು 2004ರ ಜುಲೈನಲ್ಲೇ ಬಿಹಾರ ಗೃಹ ಸಚಿವಾಲಯದ ಮೂಲಕ ದಯಾ ಮನವಿ ಸಲ್ಲಿಸಿದ್ದರೂ, 2016ರ ವರೆಗೂ ಕೇಂದ್ರ ಗೃಹ ಸಚಿವಾಲಯ ಅಥವಾ ರಾಷ್ಟ್ರಪತಿಯವರ ಕಚೇರಿಯನ್ನಾಗಲಿ ತಲುಪಿರಲಿಲ್ಲ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರವೇಶದಿಂದ 12 ವರ್ಷಗಳ ನಂತರದಲ್ಲಿ ಕ್ಷಮೆ ಮನವಿ ಅರ್ಜಿ ಪ್ರಕ್ರಿಯೆ ಮುಂದುವರಿದಿದೆ.
35 ಜನ ‘ಭೂಮಿಹಾರ್‌’(ಭೂಮಿಯ ಒಡೆತನ ಹೊಂದಿದ್ದ ಮೇಲ್ವರ್ಗದವರು)ರನ್ನು ಹತ್ಯೆ ಮಾಡಿದ ಆರೋಪ ಸಾಬೀತಾದ ಬಳಿಕ ಸೆಷನ್ಸ್‌ ಕೋರ್ಟ್ 2001ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. 2002ರಲ್ಲಿ ಸುಪ್ರೀಂ ಕೋರ್ಟ್‌ ಶಿಕ್ಷೆಯ ತೀರ್ಪನ್ನು ಅನುಮೋದಿಸಿತ್ತು.
SCROLL FOR NEXT