ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಂದೇರ್ ಬಲ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಅಡಗಿ ಕುಳಿತಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಸೇನೆ ಯಶಸ್ವಿಯಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ.
ಇಬ್ಬರು ಉಗ್ರರು ಅವಿತುಕುಳಿತಿರುವುದಾಗಿ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಇಂದು ಬೆಳಿಗ್ಗೆ ಭಾರತೀಯ ಸೇನೆ ಹಡೂರಾ ವಲಯ ಪ್ರದೇಶಕ್ಕೆ ಮುತ್ತಿಗೆ ಹಾಕಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ವೇಳೆ ಉಗ್ರರು ಏಕಾಏಕಿ ಸೇನಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ನಂತರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದ ಸೇನೆ ಅಡಗಿ ಕುಳಿತಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಉಗ್ರರ ಬಳಿಯಿದ್ದ 2 ಎಕೆ-47ನ್ನು ಸೇನೆ ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಯುತ್ತಿರುವುದಾಗಿ ತಿಳಿದುಬಂದಿದೆ.
ರಜೌರಿ: ಗಡಿ ನುಸುಳುತ್ತಿದ್ದ ಓರ್ವ ಉಗ್ರನ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರಬನಿ ಪ್ರದೇಶಲ್ಲೂ ಉಗ್ರರು ಹಾಗೂ ಭಾರತೀಯೇ ಸೇನೆ ನಡುವೆ ಗುಂಡಿನ ಚಕಮಕಿಗಳು ನಡೆದಿದ್ದು, ಉಗ್ರ ದಾಳಿಗೆ ಸೇನೆ ದಿಟ್ಟ ಉತ್ತರವನ್ನು ನೀಡಿ ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದ ಓರ್ವ ಉಗ್ರರನನ್ನು ಹತ್ಯೆ ಮಾಡಿದೆ.
ಗಣರಾಜ್ಯೋತ್ಸವ ದಿನಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿಯಿದ್ದು, ದೇಶದಲ್ಲಿ ಶಾಂತಿ ಕದಡುವ ಸಲುವಾಗಿ ಉಗ್ರರು ಸಂಚು ರೂಪಿಸುತ್ತಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಖಚಿತ ಮಾಹಿತಿ ಮೇರೆಗೆ ಸೇನಾ ಪಡೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಪ್ರದೇಶದಲ್ಲಿದ್ದ ಉಗ್ರ ಅಡುತಾಣಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಸ್ಫೋಟಕ ಸಾಮಾಗ್ರಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿತ್ತು.