ದೇಶ

ಒಂದು ಕುಟುಂಬಕ್ಕೆ ಒಂದೇ ಟಿಕೆಟ್: ಉತ್ತರಾಖಂಡ್ ಕಾಂಗ್ರೆಸ್ ನಲ್ಲಿ ಪ್ರಧಾನಿ ಮೋದಿ ಮಾದರಿ ಅಳವಡಿಕೆ!

Srinivas Rao BV
ಡೆಹ್ರಾಡೂನ್: ರಾಜಕರಣದಲ್ಲಿರುವವರ ಕುಟುಂಬ ಸದಸ್ಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬಾರದೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯನ್ನು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಾಖಂಡ್ ಕಾಂಗ್ರೆಸ್ ಅಳವಡಿಸಿಕೊಂಡಂತಿದೆ. 
2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ತೊಡಗಿದೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲದೇ ಚುನಾವಣೆಗಳಲ್ಲಿ ಬಿಜೆಪಿ ನಾಯಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬಾರದು ಎಂದು ರಾಜ್ಯ ಬಿಜೆಪಿ ಘಟಕಗಳಿಗೆ ಇತ್ತೀಚೆಗಷ್ಟೇ ಸ್ಪಷ್ಟ ಸೂಚನೆ ರವಾನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ, ಸೂಚನೆಗಳನ್ನು ಉತ್ತರಾಖಂಡ್ ಬಿಜೆಪಿಯೇ ನಿರ್ಲಕ್ಷಿಸಿದಂತೆ ತೋರುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಮೋದಿ ಮಾದರಿಯನ್ನು ಅಳವಡಿಸಿಕೊಂಡಂತಿದ್ದು, ಒಂದು ಕುಟುಂಬದಿಂದ ಒಬ್ಬರಿಗೇ ಟಿಕೆಟ್ ನೀಡಲು ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ತೀರ್ಮಾನಿಸಿದೆ. 
ಬಿಜೆಪಿ ಮಾತ್ರ ತಂದೆ-ಮಗ, ಪತಿ-ಪತ್ನಿಯರಿಗೆ, ಹಿರಿಯ ನಾಯಕರ ಸಂಬಂಧಿಕರಿಗೆ ಟಿಕೆಟ್ ಕೊಡಿಸುವಲ್ಲಿ ನಿರತವಾಗಿದೆ. ಇದಕ್ಕೆ ಪೂರಕವೆಂಬಂತೆ  ಸಂಪುಟ ದರ್ಜೆಯ ಮಾಜಿ ಸಚಿವ ಯಶ್ ಪಾಲ್ ಆರ್ಯಾ ಹಾಗೂ ಅವರ ಮಗ ಸಂಜೀವ್ ಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅನುಕ್ರಮವಾಗಿ ಬಾಜ್ ಪುರ್, ನೈನಿತಾಲ್ ನಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.   
ಇನ್ನು ಮಾಜಿ ಸಿಎಂ ವಿಜಯ್ ಬಹುಗುಣಾ ಅವರ ಮಗ ಸೌರಭ್ ಗೂ ಸಹ ಟಿಕೆಟ್ ನೀಡಲಾಗಿದ್ದು, ಈ ಹಿಂದೆ ಬಹುಗುಣಾ ಅವರು ಪ್ರತಿನಿಧಿಸುತ್ತಿದ್ದ ಸಿತಾರ್ ಗಂಜ್ ವಿಧಾನಸಭಾ ಕ್ಷೇತ್ರದಿಂದ ಮಗ ಸೌರಭ್ ಸ್ಪರ್ಧಿಸಲಿದ್ದಾರೆ. ಇನ್ನು ಮಾಜಿ ಸಿಎಂ ಬಿಸಿ ಖಂಡೂರಿಯ ಪುತ್ರಿ ರಿತು ಸಹ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ. ಉತ್ತರಾಖಂಡ್ ಬಿಜೆಪಿಯ ವಕ್ತಾರ ಮುನ್ನಾ ಸಿಂಗ್ ಹಾಗೂ ಅವರ ಪತ್ನಿ ಮಧು ಸಹ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 
SCROLL FOR NEXT