ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 10 ಯೋಧರು ಹುತಾತ್ಮರಾಗಿದ್ದಾರೆ ಎಂದು ಗುರುವಾರ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಹಲವು ಯೋಧರು ನಾಪತ್ತೆಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಇದುವರೆಗೆ ಕಿರಿಯ ದರ್ಜೆಯ ಓರ್ವ ಅಧಿಕಾರಿ ಸೇರಿದಂತೆ ಏಳು ಯೋಧರನ್ನು ರಕ್ಷಿಸಲಾಗಿದೆ ಮತ್ತು ಮೂವರು ಯೋಧರ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ಗುರೇಜ್ ಸೆಕ್ಟರ್ ನಲ್ಲಿ ಇಂದು ಮತ್ತೆ ಹಿಮಪಾತವಾಗಿದ್ದು, ಗಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ ಕ್ಯಾಂಪ್ ಗೆ ವಾಪಸಾಗುತ್ತಿದ್ದ ಯೋಧರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಸೈನಿಕರಿಗಾಗಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಸೇನೆಯ ನುರಿತ ತಜ್ಞರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಹಲವು ಯೋಧರು ಹಿಮಪಾತದಲ್ಲಿ ನಾಪತ್ತೆಯಾಗಿದ್ದು, ಈಗಲೇ ಸಾವಿನ ಸಂಖ್ಯೆ ಕುರಿತು ನಿಖರ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯಷ್ಟೇ ಇದೇ ಕಾಶ್ಮೀರದ ಸೋನಾಮಾರ್ಗ್ ಸಮೀಪದ ಸೇನಾ ಕ್ಯಾಂಪ್ ಬಳಿ ಸಂಭವಿಸಿದ ಹಿಮಪಾತದಿಂದಾಗಿ ಸೇನಾಧಿಕಾರಿ ಮೇಜರ್ ಅಮಿತ್ ಸಾಗರ್ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದರು. ಅಂತೆಯೇ ಹಿಮದಡಿಯಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಇತರೆ ನಾಲ್ಕು ಮಂದಿ ಯೋಧರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಹಿಮಪಾತವಾಗಿದ್ದು, ಹಲವು ಸೈನಿಕರು ನಾಪತ್ತೆಯಾಗಿದ್ದಾರೆ.
ಕಳೆದೊಂದು ವಾರದಿಂದ ಜಮ್ಮು ಮತ್ತು ಕಾಶ್ಮೀರದ ಹವಮಾನದಲ್ಲಿ ಭಾರಿ ಏರುಪೇರಾಗುತ್ತಿದ್ದು, ಭಾರಿ ಪ್ರಮಾಣದ ಹಿಮಪಾತವಾಗುತ್ತಿದೆ. ತಾಪಮಾನ ಕುಸಿತ ಹಾಗೂ ಹಿಮಪಾತಗಳಿಂದಾಗಿ ಗಡಿಯಲ್ಲಿ ಸೈನಿಕರು ಕರ್ತವ್ಯ ನಿರ್ವಹಿಸುವುದೇ ದುಸ್ತರವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics