ದೇಶ

ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರನ್ನು ಪಂಜಾಬ್ ಗೆ ಹರಿಸುತ್ತೇವೆ: ಮೋದಿ

Sumana Upadhyaya
ಜಲಂಧರ್ (ಪಂಜಾಬ್):  ಪಾಕಿಸ್ತಾನಕ್ಕೆ ತ್ಯಾಜ್ಯವಾಗಿ ಹರಿಯುವ ಸಿಂಧೂ ನದಿ ನೀರನ್ನು ಪಂಜಾಬ್ ಗೆ ಹರಿಸುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. 
ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಜಲಂಧರ್ ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಿಂಧೂ ನದಿ ನೀರು ಭಾರತಕ್ಕೆ ಸೇರಬೇಕಾಗಿದ್ದು ಅದನ್ನು ಪಾಕಿಸ್ತಾನಕ್ಕೆ ಹರಿಯಬಿಡಲಾಗಿದೆ. ಅದನ್ನು ನಮ್ಮ ಸರ್ಕಾರ ಪುನಃ ಪಂಜಾಬ್ ಗೆ ತರುತ್ತದೆ ಎಂದು ರಾಜ್ಯದ ಜನತೆಗೆ ಮೋದಿ ಭರವಸೆ ನೀಡಿದ್ದಾರೆ. 
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ 70 ವರ್ಷಗಳಲ್ಲಿ ದೇಶವನ್ನು ಲೂಟಿ ಮಾಡಿದ ಪಕ್ಷ ಇಂದು ಅಪಾಯದ ಸ್ಥಿತಿಯಲ್ಲಿದೆ ಎಂದು ಟೀಕಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ದೇಶ ವಿನಾಶದ ರಾಜಕೀಯವನ್ನು ಕಂಡಿದೆ. ಇದೀಗ ರಾಜಕೀಯ ಅಭಿವೃದ್ಧಿಯ ಸಮಯವಾಗಿದೆ. ಕಾಂಗ್ರೆಸ್ ಸರ್ಕಾರದ 48 ವರ್ಷಗಳ ಆಡಳಿತದಲ್ಲಿ ತೂಗುಯ್ಯಾಲೆಯಲ್ಲಿ ಸಾಗುತ್ತಿದ್ದ ಒಂದು ಶ್ರೇಣಿ, ಒಂದು ಪಿಂಚಣಿ(ಒಆರ್ಒಪಿ)ಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿತು ಎಂದರು.
ನನ್ನ ಹೋರಾಟ ದೇಶದ ಪ್ರಾಮಾಣಿಕ ಜನರ ಪರವಾಗಿ ಎಂದ ಪ್ರಧಾನಿ, ಅಡ್ಡಿ, ತೊಂದರೆಗಳನ್ನು ಮಾಡಲು ಪ್ರಯತ್ನಿಸುವವರಿಗೆ ನಾನು ಎಂದಿಗೂ ತಲೆಬಾಗುವುದಿಲ್ಲ ಎಂಬುದನ್ನು ನನ್ನನ್ನು ಟೀಕಿಸುವವರಿಗೆ ಹೇಳುತ್ತೇನೆ, ಪಂಜಾಬ್ ಜನತೆ ಮುಳುಗಡೆ ಅಂಚಿನಲ್ಲಿರುವ ಹಡಗಿನಲ್ಲಿ ಕಾಲಿಡಲು ಬಯಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ತನ್ನ ವಿನಾಶದ ಕೊನೇಯ ಹಂತದಲ್ಲಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಹತಾಶೆಯಿಂದ ಕಾಂಗ್ರೆಸ್ ಪಕ್ಷ ಎಲ್ಲೆಡೆ ಸುತ್ತುತ್ತಾ ಮತ ಭಿಕ್ಷೆ ಕೇಳುತ್ತಿದೆ. ನೀರಿನಿಂದ ಹೊರಬಂದ ಮೀನಿನಂತೆ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಲು ನುಲಿಯುತ್ತಿದೆ, ಇಂದು ಕಾಂಗ್ರೆಸ್ ನ ನಿಜವಾದ ಉದ್ದೇಶವೇನು, ಅವರ ಗುರಿಯೇನು ಎಂದು ಯಾರು ಕೂಡ ಹೇಳಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಇಂದು ಪಂಜಾಬ್ ನ ಯುವಕರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ಮಾಡಲಾಗುತ್ತಿದೆ. ಹಾಗೆ ಮಾಡಿದವರು ಪಂಜಾಬ್ ನ ಹೆಮ್ಮೆ, ಘನತೆಯ ಬಗ್ಗೆ ಇಂದು ಪಾಠ ಕಲಿಯಬೇಕಾಗಿದೆ. ಇನ್ನೊಂದು ಸಲ ಅವರು ಪಂಜಾಬ್ ಮೇಲೆ ಬೆರಳು ತೋರಿಸಲು ಸಾಧ್ಯವಿಲ್ಲ. ಪಂಜಾಬ್ ರಾಜ್ಯ ದೇಶದಲ್ಲಿಯೇ ಧೈರ್ಯ, ಪರಾಕ್ರಮ, ವೀರ ಯೋಧರಿಗೆ ಹೆಸರು ಮಾಡಿದೆ. ಇದು ಗುರು, ಸಂತರು ಮತ್ತು ತ್ಯಾಗಿಗಳ ಭೂಮಿಯಾಗಿದೆ ಎಂದು ಶ್ಲಾಘಿಸಿದರು. ಬಿಜೆಪಿ ಆಡಳಿತದಡಿಯಲ್ಲಿ ಪಂಜಾಬ್ ನ ಶೇಕಡಾ 70ರಷ್ಟು ಯುವಕರು ಮಾದಕ ವಸ್ತು ವ್ಯಸನಿಗಳಾಗಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಇಂದಿನ ರ್ಯಾಲಿಯಲ್ಲಿ ಈ ಮಾತು ಹೇಳಿದ್ದಾರೆ. ಮುಂದಿನ ಸಲವೂ ಪ್ರಕಾಶ್ ಸಿಂಗ್ ಬಾದಲ್ ಅವರೇ ಮುಖ್ಯಮಂತ್ರಿಯಾಗಬೇಕೆಂದು ಇಲ್ಲಿನ ಜನರು ಬಯಸುತ್ತಿದ್ದಾರೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT