ದೇಶ

250 ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ವಂಚಕಿ ಖುಷ್ಬೂ ಜನರನ್ನು ವಂಚಿಸಲು ಸಾಮಾಜಿಕ ಜಾಲತಾಣಗಳ ಬಳಕೆ

Manjula VN

ಬೆಂಗಳೂರು: ಐಎಎಸ್ ಅಧಿಕಾರಿ, ವಕೀಲೆ ಎಂದು ನಂಬಿಸಿ ಅಮಾಯಕರಿಗೆ ಮೋಸ ಮಾಡುತ್ತಿದ್ದ, 250 ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ವಂಚಕಿ ಖುಷ್ಬೂ ಶರ್ಮಾಳ ವಿರುದ್ದ ನಗರದ ಪೊಲೀಸರು ಗುರುವಾರ ಚಾರ್ಚ್ ಶೀಟ್'ನ್ನು ಸಲ್ಲಿಕೆ ಮಾಡಿದ್ದಾರೆ.

ಆರೋಪಿ ರಾಜಸ್ತಾನ ಮೂಲದ ಖುಷ್ಬೂ ಶರ್ಮಾ (26) ವಿರುದ್ಧ ಪುಲಕೇಶಿ ನಗರದ ಪೊಲೀಸರು, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸುಮಾರು 200ಕ್ಕೂ ಅಧಿಕ ಪುಟಗಳ ದೋಷಾರೋಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಯುಬಿ ಸಿಟಿಯಲ್ಲಿ ಕಡಿಮೆ ಬೆಲೆಗೆ ಕಚೇರಿಗೆ ಜಾಗ ಕೊಡಿಸುವುದಾಗಿ ಹೇಳಿದ್ದ ಈಕೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಪ್ರೀಂಕೋರ್ಟ್ ಹಿರಿಯ ವಕೀಲರೊಬ್ಬಿಗೆ ವಂಚನೆ ಮಾಡಿದ್ದಳು. ಈ ಸಂಬಂಧ ವಕೀಲ ಸಂಕೇತ್ ಏಣಗಿ ಅವರು 2016ರಲ್ಲಿ ಪುಲಕೇಶಿ ನಗರ ಪೊಲೀಸರಿಗೆ ದೂರು ನೀಡಿದ್ದರು.
 
ಖುಷ್ಬೂ ಶರ್ಮಾ ಬಂಧನ ಕುರಿತಂತೆ ಮಾಹಿತಿ ನೀಡಿರುವ ಪೊಲೀಸರು, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್ ಗಢ, ತೆಲಂಗಾಣ, ಆಂಧ್ರಪ್ರದೇಶ ಸೇರಿತಂತೆ ಮತ್ತಿತರ ರಾಜ್ಯಗಳಲ್ಲಿ ಈಕೆಯ ವಿರುದ್ಧ 250ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಗಳಿವೆ. ಈ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

ವಿವಿಧ ರಾಜ್ಯಗಳ 35ಕ್ಕೂ ಹೆಚ್ಚು ಜನರ ಹೇಳಿಕೆಯನ್ನು ಈಗಾಗಲೇ ದಾಖಲು ಮಾಡಿಕೊಳ್ಳಲಾಗಿದೆ. ಇದಲ್ಲದೆ, ಅತ್ಯಾಚಾರ ಆರೋಪ ಮಾಡಿ ಹಲವರಿಗೆ ವಂಚನೆ ಮಾಡಿರುವುದಕ್ಕೂ ಸಾಕಷ್ಟು ಆಡಿಯೋ ಕ್ಲಿಪ್ ಗಳು ಕೂಡ ಲಭ್ಯವಾಗಿದೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರಾಜಕೀಯ ಹಾಗೂ ಸಿನಿಮಾ ತಾರೆಗಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುತ್ತಿದ್ದ ಈಗೆ, ನಂತರ ಆವರೊಂದಿಗೆ ಚಾಟ್ ಮಾಡಲು ಆರಂಭಿಸುತ್ತಿದ್ದಳು, ಕಾಫಿ, ಊಟಕ್ಕೆಂದು ಕರೆದು ಅತ್ಯಾಚಾರದ ಬೆದರಿಕೆ ಹಾಕಿ ದರೋಡೆ ಮಾಡುತ್ತಿದ್ದಳೆಂದು ಪೊಲೀಸರು ಹೇಳಿದ್ದಾರೆ.

ಖುಷ್ಬೂ ಚಿಕ್ಕವಳಿದ್ದಾಗಲೇ ಆಕೆಯ ತಂದೆ ತಾಯಿಯಿಂದ ವಿಚ್ಛೇದನ ಪಡೆದು ದೂರಾಗಿದ್ದರು. ತಂದೆಯೊಂದಿಗೆ ಖುಷ್ಬೂ ಜೈಪುರದಲ್ಲಿ ವಾಸವಿದ್ದಳು. ರೈಲು ಅಪಘಾತವೊಂದರಲ್ಲಿ ಖುಷ್ಬೂ ತನ್ನ ಬಲಗೈಯನ್ನು ಕಳೆದುಕೊಂಡಿದ್ದಳು. 8ನೇ ತರಗತಿ ಅನುತ್ತೀರ್ಣಗೊಂಡಿದ್ದ ಈಕೆ ನಕಲಿ ಪ್ರಮಾಣಪತ್ರಗಳನ್ನು ಬಳಸುತ್ತಿದ್ದಳು. ಅಲ್ಲದೆ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನು ಸರಾಗಿ ಮಾತನಾಡಿಕೊಂಡು ಜನರಿಗೆ ವಂಚಿಸುತ್ತಿದ್ದಳು.

SCROLL FOR NEXT