ನವದೆಹಲಿ: ಮೀಸಲಾತಿ ಆಗ್ರಹಿಸಿ ಭಾನುವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಹರಿಯಾಣ ರಾಜ್ಯದೆಲ್ಲಡೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮೀಸಲಾತಿಗೆ ಆಗ್ರಹಿಸಿ ಹರಿಯಾಣ ರಾಜ್ಯದ 19 ಜಿಲ್ಲೆಗಳಲ್ಲಿ ಜಾಟ್ ಸಮುದಾಯ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಹರಿಯಾಣ ಸರ್ಕಾರ ಹಲವೆಡೆ ಸೆಕ್ಷನ್ 144 ಜಾರಿ ಮಾಡಿತ್ತು. ಈ ನಿಷೇಧಾಜ್ಞೆ ಇಂದೂ ಕೂಡ ಮುಂದುವರೆಯಲಿದ್ದು, 5 ಅಥವಾ ಅದಕ್ಕೂ ಹೆಚ್ಚು ಮಂದಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಂದ 500 ಮೀಟರ್ ಗಳವರೆಗೆ ಗುಂಪಾಗಿ ಹೋಗುವಂತಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ನಡೆದಿದ್ದ ಜಾಟ್ ಸಮುದಾಯದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.ರೊಹ್ತಕ್, ಸೋನಿಪತ್ ಮತ್ತು ಝಜ್ಜರ್ ಸೇರಿದಂತೆ ಹಲವಾರು ಜಿಲ್ಲೆಗಳ ಮೇಲೆ ಪ್ರತಿಭಟನೆಯ ಬಿಸಿ ತೀವ್ರವಾಗಿ ತಟ್ಟಿತ್ತು. ಇದಲ್ಲದೇ ರಾಜಧಾನಿ ದೆಹಲಿ ಕೂಡ ಪ್ರತಿಭಟನೆಯಿಂದ ತತ್ತರಿಸಿ ಹೋಗಿತ್ತು.