ಡೊನಾಲ್ಡ್ ಟ್ರಂಪ್ ಅವರ ವಕ್ತಾರ ಸಿಯಾನ್ ಸ್ಪೈಸರ್
ವಾಷಿಂಗ್ ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬೆಂಬಲ ನೀಡಿದ್ದ ಭಾರತದ ಯುಎನ್ ಎಸ್ ಸಿ ಸದಸ್ಯತ್ವ( ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ) ದ ಬಗ್ಗೆ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವೇನು? ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಅವರ ವಕ್ತಾರರು ನಿರುತ್ತರರಾಗಿದ್ದಾರೆ.
ಭದ್ರತಾ ಮಂಡಳಿಯ ಹೊಸ ಸದಸ್ಯತ್ವಗಳ ಬಗ್ಗೆ ಹೆಚ್ಚಿನದ್ದನ್ನು ಮಾತನಾಡುವುದಿಲ್ಲ ಎಂದಷ್ಟೇ ಡೊನಾಲ್ಡ್ ಟ್ರಂಪ್ ಅವರ ವಕ್ತಾರ ಸಿಯಾನ್ ಸ್ಪೈಸರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮೂಲಕ ಅಮೆರಿಕಾದ ಹೊಸ ಆಡಳಿತ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ.
ಭಾರತದ ಯುಎನ್ಎಸ್ ಸಿ ಸದಸ್ಯತ್ವದ ಬಗ್ಗೆ ಮಾತನಾಡಲು ನಿರಾಕರಿಸಿರುವ ಸ್ಪೈಸರ್, ಭಾರತ-ಅಮೆರಿಕಾದ ದ್ವಿಪಕ್ಷೀಯ ಬಾಂಧವ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನೀತಿಗಳು ಈಗಷ್ಟೇ ರೂಪುಗೊಳ್ಳುತ್ತಿವೆ. ಈ ಪೈಕಿ ಭಾರತದ ಯುಎನ್ಎಸ್ ಸಿ ಸದಸ್ಯತ್ವದ ವಿಷಯಕ್ಕಿಂತ ಆದ್ಯತೆಯ ವಿಷಯಗಳು ಅಮೆರಿಕಾದ ವಿದೇಶಾಂಗ ನೀತಿಗಳಲ್ಲಿ ಇರಬಹುದು ಎಂದಷ್ಟೇ ಹೇಳಿದ್ದಾರೆ. ಅಮೆರಿಕಾದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ, ತಮ್ಮ ಆಡಳಿತಾವಧಿಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಈ ಬಗ್ಗೆ ಹೊಸ ಅಧ್ಯಕ್ಷರ ನಿಲುವು ಏನಿರಲಿದೆ ಎಂಬ ಕುತೂಹಲ ಮೂಡಿದೆ.