ನವದೆಹಲಿ: ಸಿಕ್ಕಿಂನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ದೋಕಾ ಲಾ ಪ್ರದೇಶದಲ್ಲಿ ಹೆಚ್ಚು ಸೇನೆ ನಿಯೋಜಿಸಿದ್ದು, ಇದರೊಂದಿಗೆ 1962ರ ಭಾರತ-ಚೀನಾ ಯುದ್ಧದ ನಂತರ ಅತ್ಯಂತ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ.
ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ) ಸಿಕ್ಕಿಂನಲ್ಲಿದ್ದ ಭಾರತದ ಎರಡು ಬಂಕ್ ರಗಳನ್ನು ನಾಶಪಡಿಸಿದ ನಂತರ ಭಾರತ ಆ ಪ್ರದೇಶದಲ್ಲಿ ಅತಿ ಹೆಚ್ಚು ಸೇನೆಯನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ದೋಕಾ ಲಾ ಲಾಲ್ಟೆನ್ ನಲ್ಲಿ 2012ರಲ್ಲಿ ನಿರ್ಮಿಸಲಾಗಿದ್ದ ಎರಡು ಬಂಕರ್ ಗಳನ್ನು ತೆರವುಗೊಳಿಸುವಂತೆ ಪಿಎಲ್ ಎ ಭಾರತೀಯ ಸೇನೆಗೆ ಕೇಳಿಕೊಂಡಿತ್ತು. ಆದರೂ ಭಾರತೀಯ ಸೇನೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ಜೂನ್ 6ರಂದು ಚೀನಾ ಬುಲ್ಡೋಜರ್ ಗಳನ್ನು ಬಳಸಿ ಭಾರತೀಯ ಬಂಕರ್ ಗಳನ್ನು ನಾಶಪಡಿಸಿತ್ತು. ಇದರ ಬೆನ್ನಲ್ಲೇ ಈಗ ಭಾರತ ಆ ಪ್ರದೇಶದಲ್ಲಿ ಹೆಚ್ಚು ಸೇನಾಪಡೆಗಳನ್ನು ನಿಯೋಜಿಸಿದೆ.
ಭಾರತೀಯ ಸೇನೆಯು ಸಿಕ್ಕಿಂ-ಚೀನಾ ಗಡಿ ಬಳಿ ತನ್ನ ಕೆಲ ತುಕಡಿಗಳನ್ನು ಕಳುಹಿಸಿದೆ. ಚೀನಾ ಸೇನೆಯು ಸಿಕ್ಕಿಂ ಗಡಿ ಬಳಿ ಕಳೆದ ಒಂದು ತಿಂಗಳಿನಿಂದ ಕ್ಯಾತೆ ತೆಗೆದು ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಕ್ರಮ ಕೈಗೊಂಡಿದೆ. ಗಡಿಯಲ್ಲಿ ಈಗಾಗಲೇ ತುಕಡಿಗಳಿದ್ದರೂ ಹೆಚ್ಚಿನ ಸುರಕ್ಷತೆಗಾಗಿ ಇನ್ನಷ್ಟು ಸೈನಿಕರನ್ನು ನಿಯೋಜಿಸಲಾಗಿದೆ.
ದೋಕಾ ಲಾ ಪ್ರದೇಶವು ತನಗೆ ಸೇರಿದ್ದು ಎಂಬುದು ಚೀನಾದ ವಾದವಾಗಿದೆ. ಭೂತಾನ್'ದ್ದೆಂದು ಹೇಳಲಾಗುವ ಈ ಪ್ರದೇಶದಲ್ಲಿ ಭಾರತ ಮತ್ತು ಭೂತಾನ್ ದೇಶಗಳ ಸೈನಿಕರು ಜಂಟಿಯಾಗಿ ಹಲವು ವರ್ಷಗಳಿಂದ ಪಹರೆ ನಡೆಸಿಕೊಂಡು ಬಂದಿದ್ದಾರೆ. 2012ರಲ್ಲಿ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಭಾರತೀಯ ಸೇನೆಯು ಇಲ್ಲಿ ಎರಡು ಬಂಕರ್'ಗಳನ್ನೂ ಸ್ಥಾಪಿಸಿತ್ತು. ಈಗ ಅವನ್ನು ಚೀನಾ ನಾಶ ಮಾಡಿದೆ. ಜೊತೆಗೆ ಚೀನಾ ಸಾಕಷ್ಟು ಸಂಖ್ಯೆಯಲ್ಲಿ ತನ್ನ ಸೇನಾ ತುಕಡಿಗಳನ್ನು ಸ್ಥಳಕ್ಕೆ ಕರೆತಂದಿದೆ. ಹೀಗಾಗಿ ಭಾರತೀಯ ಸೇನೆಯ ಅನಿವಾರ್ಯವಾಗಿ ತನ್ನ ತುಕಡಿಗಳ ಬಲ ವೃದ್ಧಿಸಿಕೊಂಡಿದೆ.