ದೇಶ

ಉತ್ತರ ಪ್ರದೇಶ ಮಹಿಳಾ ಪೊಲೀಸ್ "ಸಿಂಗಂ" ಶ್ರೇಷ್ಠಾ ಠಾಕೂರ್ ಎತ್ತಂಗಡಿ

Srinivasamurthy VN

ಪಾಟ್ನಾ: ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಬಿಜೆಪಿ ನಾಯಕರಿಗೆ ಮುಲಾಜಿಲ್ಲದೇ ದಂಡ ವಿಧಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಅವರನ್ನು ಉತ್ತರ ಪ್ರದೇಶ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕಳೆದ ಜೂನ್ 22ರಂದು ಠಾಕೂರ್ ಮತ್ತು ಇತರ ಪೊಲೀಸರು ಸೈನಾ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಹೆಲ್ಮೆಟ್ ಧರಿಸದೆ ಬಂದ ಮೋಟಾರ್ ವಾಹನ ಸವಾರರೊಬ್ಬರಿಗೆ 200 ರುಪಾಯಿ ದಂಡ  ವಿಧಿಸಿದ್ದರೆ. ಈ ವೇಳೆ ಬೈಕ್ ಸವಾರ ತಾನು ಬಿಜೆಪಿ ನಾಯಕ ಪ್ರಮೋದ್ ಕುಮಾರ್, ತನ್ನ ಪತ್ನಿ ಬುಲಂದ್‍ ಶಹರ್ ಜಿಲ್ಲಾ ಪಂಚಾಯತ್ ಸದಸ್ಯೆ ಎಂದು ಹೇಳಿದ್ದರೂ, ಶ್ರೇಷ್ಠಾ ಠಾಕೂರ್ ಸುಮ್ಮನೆ ಬಿಟ್ಟಿರಲಿಲ್ಲ. ಟ್ರಾಫಿಕ್ ನಿಯಮ  ಉಲ್ಲಂಘಿಸಿದ್ದಕ್ಕಾಗಿ ಯಾವುದೇ ಮುಲಾಜಿಲ್ಲದೇ ದಂಡ ವಿಧಿಸಿದ್ದರು. ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಐವರು  ಕಾರ್ಯಕರ್ತರನ್ನು ಅಧಿಕಾರಿ ಶ್ರೇಷ್ಠಾ ಠಾಕೂರ್ ಜೈಲಿಗಟ್ಟಿದ್ದರು. ಅಲ್ಲದೆ ತಪ್ಪು ಮಾಡಿದ್ರೆ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನೂ ಕೂಡ ಬಿಡುವುದಿಲ್ಲ ಎಂದು ಗುಡುಗಿದ್ದರು.

ಈ ಪ್ರಕರಣ ನಡೆದ ಒಂದೇ ವಾರದಲ್ಲಿ ಶ್ರೇಷ್ಠಾ ಅವರು ಸೇರಿದಂತೆ ಅವರ ಹಲವು ಸಹೋದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಉತ್ತರ ಪ್ರದೇಶದ ಬಹರೈಚ್ ಗೆ ಶ್ರೇಷ್ಠಾ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು  ತಿಳಿದುಬಂದಿದೆ.

ಮೂಲಗಳ  ಪ್ರಕಾರ ಶ್ರೇಷ್ಠಾ ಅವರು ದಂಡ ವಿಧಿಸಿದ್ದ ಪ್ರಕರಣದ ಬಗ್ಗೆ ಬಿಜೆಪಿಯ 11 ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೂರು ನೀಡಿದ್ದರು. ಬಿಜೆಪಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡ  ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಈ ಶಾಸಕ, ಸಂಸದರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಮುಖಂಡ ಮುಖೇಶ್ ಭಾರದ್ವಾಜ್ ಅವರು, ಪೊಲೀಸ್ ಅಧಿಕಾರಿ ಶ್ರೇಷ್ಠಾ ಅವರು ಸಿಎಂ ಯೋಗಿ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ  ದೂರು ಸಲ್ಲಿಕೆ ಮಾಡಿದ್ದೆವು ಎಂದು ಹೇಳಿದ್ದಾರೆ.

SCROLL FOR NEXT