ಗುವಾಹತಿ: ಜಾನುವಾರು ಸಾಗಿಸುತ್ತಿದ್ದ ಮೂರು ವಾಹನಗಳ ಚಾಲಕರ ಮೇಲೆ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಸ್ಸಾಂ ಪೊಲೀಸರು ಹಿಂದೂ ಯುವ ಛತ್ರ ಪರಿಷತ್ ನ ಐವರು ಸದಸ್ಯರನ್ನು ಬಂಧಿಸಿದ್ದಾರೆ.
ಕಳೆದ ಭಾನುವಾರ ಕಮ್ರೂಪ್ ಜಿಲ್ಲೆಯ ದಿಮೋರಿಯಾದಲ್ಲಿ ಜಾನುವಾರು ಸಾಗುಸುತ್ತಿದ್ದ ಒಂದು ಟ್ರಕ್ ಹಾಗೂ ಎರಡು ಟೆಂಪೊಗಳ ತಡೆದು ಅದರ ಚಾಲಕರ ಮೇಲೆ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಸೋಮವಾರವೇ ಬಂಧಿಸಲಾಗಿದ್ದು, ಇತರೆ ನಾಲ್ವರನ್ನು ಇಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಹಿಂದೂ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷೆನ್ 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗುವಾಹತಿ ಪೊಲೀಸ್ ಆಯುಕ್ತ ಹಿರೇನ್ ನಾಥ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.