ನವದೆಹಲಿ: ಆಧಾರ್ ಗೆ ಸಂಬಂಧಿಸಿದ ಎಲ್ಲಾ ವಿವಾದಿತ ವಿಷಯಗಳ ಕುರಿತು ಸಾಂವಿಧಾನಿಕ ಪೀಠ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಮೂರ್ತಿ ಜೆ ಚಲಮೇಶ್ವರ್ ನೇತೃತ್ವದ ತ್ರಿ ಸದಸ್ಯ ಪೀಠ ಆಧಾರ್ ಕುರಿತ ಎಲ್ಲ ಪ್ರಶ್ನೆಗಳನ್ನು ತೀರ್ಮಾನಿಸುವ ದಿಶೆಯಲ್ಲಿ ಸಾಂವಿಧಾನಿಕ ಪೀಠ ರಚಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸಬೇಕು ಎಂದು ಕಕ್ಷಿದಾರರಿಗೆ ಸೂಚಿಸಿತ್ತು.
"ಕಕ್ಷಿದಾರರಾಗಿರುವ ನೀವು (ಅರ್ಜಿದಾರರು ಮತ್ತು ಕೇಂದ್ರ ಸರಕಾರ) ಆಧಾರ್ ಕುರಿತ ಎಲ್ಲ ವಿವಾದಿತ ವಿಷಯಗಳನ್ನು ಅಂತಿಮವಾಗಿ ತೀರ್ಮಾನಿಸುವ ಸಲುವಾಗಿ ಸಾಂವಿಧಾನಿಕ ಪೀಠ ರಚಿಸಬೇಕೆಂದು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿಯನ್ನು ಒತ್ತಾಯಿಸಬೇಕೆಂದು ನಾವು ಸಲಹೆ ಮಾಡುತ್ತೇವೆ' ಎಂದು ನ್ಯಾಮೂರ್ತಿಗಳಾದ ಚಲಮೇಶ್ವರ್, ಎ ಎ ಖನ್‌ವಿಲ್ಕರ್ ಮತ್ತು ನವೀನ್ ಸಿನ್ಹಾ ಅವರನ್ನು ಒಳಗೊಂಡ ತ್ರಿ ಸದಸ್ಯ ಪೀಠ ಹೇಳಿದೆ.
ತ್ರಿ ಸದಸ್ಯ ಪೀಠದ ಸಲಹೆಯ ಪ್ರಕಾರ ತಾವು ವರಿಷ್ಠ ನ್ಯಾಯಮೂರ್ತಿಯವರನ್ನು ಕೋರುವುದಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು ತಿಳಿಸಿದ್ದಾರೆ.
ಕಳೆದ ಜೂನ್ 27ರಂದು ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯುವುದಕ್ಕೆ ಆಧಾರ್ ಕಡ್ಡಾಯಗೊಳಿಸಿರುವವ ಕೇಂದ್ರದ ಅಧಿಸೂಚನೆಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಆದರೆ ಸರಕಾರ ಆಧಾರ್ ಇಲ್ಲದವರು ಅಂತಹ ಯೋಜನೆಗಳ ಲಾಭದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics