ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಕುಲಭೂಷಣ್ ಜಾಧವ್ ತಾಯಿಗೆ ಪಾಕಿಸ್ತಾನ ವೀಸಾ ನೀಡುವಂತೆ ತಾವೇ ಖುದ್ದಾಗಿ ಪತ್ರ ಬರೆದಿದ್ದರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸದ ಪಾಕಿಸ್ತಾನ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ವಿರುದ್ಧ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ವಾಗ್ದಾಳಿ ನಡೆಸಿದ್ದಾರೆ.
ಆದರೆ ಅಜೀಜ್ ಅವರ ಶಿಫಾರಸ್ಸಿನ ಮೇರೆಗೆ ಯಾವುದೇ ಪಾಕಿಸ್ತಾನಿ ಪ್ರಜೆ ವೈದ್ಯಕೀಯ ವೀಸಾ ನೀಡುವಂತೆ ಕೋರಿ ಮನವಿ ಸಲ್ಲಿಸಿದರೆ ಅವರಿಗೆ ಸಹಾಯ ಮಾಡುವುದಾಗಿ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಅವರು, ಭಾರತದಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ವೀಸಾಕ್ಕೆ ಅರ್ಜಿ ಸಲ್ಲಿಸುವವರ ಮೇಲೆ ನನಗೆ ಕರುಣೆಯಿದೆ. ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ಕೊಡಬೇಕೆಂದರೆ ಅದಕ್ಕೆ ಸರ್ತಾಜ್ ಅಜೀಜ್ ಅವರ ಶಿಫಾರಸು ಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿರುವ ತನ್ನ ಪುತ್ರನನ್ನು ಭೇಟಿ ಮಾಡಲು ವೀಸಾ ಅರ್ಜಿ ಸಲ್ಲಿಸಿರುವ ಆವಂತಿಕ ಜಾಧವ್ ಅವರ ಅರ್ಜಿ ವಿಲೇವಾರಿ ಬಾಕಿಯಿದೆ. ಅವರಿಗೆ ವೀಸಾ ಕೊಡಿಸುವಂತೆ ನಾನು ಖುದ್ದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರಿಗೆ ಪತ್ರ ಬರೆದಿದ್ದೇನೆ.ಆದರೆ ನನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡುವ ಸೌಜನ್ಯವನ್ನು ಕೂಡ ಸರ್ತಾಜ್ ಅಜೀಜ್ ಮಾಡಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಬಲೋಚಿಸ್ತಾನ ಪ್ರಾಂತ್ಯದಲ್ಲಿ 46 ವರ್ಷದ ಕುಲಭೂಷಣ್ ಜಾಧವ್ ನನ್ನು ಬಂಧಿಸಲಾಗಿತ್ತು. ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆಪಾದನೆ ಮೇಲೆ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿತ್ತು.