ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ರಾಂಚಿಯ ಸಿಬಿಐ ನ್ಯಾಯಾಲಯಕ್ಕೆ ನಿನ್ನೆ ಹಾಜರಾದರು.
ಪಾಟ್ನಾ:ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಜಾರಿ ನಿರ್ದೇಶನಾಲಯ ಲಾಲೂ ಪ್ರಸಾದ್ ಯಾದವ್ ಅವರ ಅಳಿಯ ಶೈಲೇಶ್ ಕುಮಾರ್ ಅವರಿಗೆ 8,000 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಸಂಬಂಧ ಸಮ್ಮನ್ಸ್ ಜಾರಿ ಮಾಡಿದೆ.
ಲಾಲೂ ಅವರ ಪುತ್ರಿ ಸಂಸದೆ ಮಿಸಾ ಭಾರ್ತಿ ಅವರನ್ನು ನಿನ್ನೆ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಂದು ಅವರ ಪತಿ ವಿರುದ್ಧ ಸಮ್ಮನ್ಸ್ ಜಾರಿ ಮಾಡಿದೆ.
ಮೊನ್ನೆ 8ರಂದು ಜಾರಿ ನಿರ್ದೇಶನಾಲಯ ಮಿಸಾ ಭಾರ್ತಿ ಮತ್ತು ಅವರ ಪತಿ ಶೈಲೇಶ್ ಕುಮಾರ್ ಅವರಿಗೆ ಸೇರಿದ ಸಂಸ್ಥೆ ಹಾಗೂದೆಹಲಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಶೋಧ ನಡೆಸಿತ್ತು.
ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಅದಕ್ಕೂ ಮುನ್ನ ಜೈನ್ ಸಹೋದರರು ಬಂಧಿತರಾಗಿದ್ದರು. ಈ ಸೋದರರು ಮಿಶಾಲಿ ಪ್ರಿಂಟರ್ಸ್ ಅಂಡ್ ಪ್ಯಾಕರ್ಸ್ ಪ್ರೈವೇಟ್ ಲಿಮಿಟೆಡ್ ನ್ನು ಹೊಂದಿದ್ದಾರೆ.
ಸಂಸದೆ ಭಾರ್ತಿ ಮತ್ತು ಅವರ ಪತಿ ಹಿಂದೆ ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಮಿಸಾ ಭಾರ್ತಿ ಮತ್ತು ಅವರ ಪತಿ ದೆಹಲಿಯ ಬಿಜ್ವಾಸನ್ ನಲ್ಲಿ ಫಾರ್ಮ್ ಹೌಸ್ ನ್ನು 2008-09ರಲ್ಲಿ 1.41 ಕೋಟಿ ರೂಪಾಯಿಗೆ ಖರೀದಿಸಿದ್ದು, ಅದರ ನಿಜವಾದ ಬೆಲೆ 50 ಕೋಟಿ ರೂಪಾಯಿಗೂ ಅಧಿಕವಾಗಿದೆ. ಮಿಶಾಲಿ ಪ್ರಿಂಟರ್ಸ್ ಕಂಪೆನಿ ಮೂಲಕ ಅಕ್ರಮವೆಸಗಿ ಕಡಿಮೆ ಬೆಲೆಗೆ ಫಾರ್ಮ್ ಹೌಸ್ ಖರೀದಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ.