ಪ್ರಧಾನಿ ಮೋದಿ ಕುರಿತ ಹಾಸ್ಯದ ಫೋಟೋ ಹಾಕಿ ಪೇಚಿಗೆ ಸಿಲುಕಿದ ಕಾಮಿಡಿ ಗ್ರೂಪ್ 'ಎಐಬಿ'
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಹಾಸ್ಯದ ಫೋಟೋವೊಂದನ್ನು ಹಾಕಿದ ಕಾಮಿಡಿ ಗ್ರೂಪ್ 'ಎಐಬಿ' ಸಾರ್ವಜನಿಕರ ಟೀಕೆಗಳಿಗೆ ಗುರಿಯಾಗಿದೆ.
ಸ್ನಾಪ್ ಚಾಟ್ ನಲ್ಲಿ ಮೋದಿಯವರ ಮುಖವನ್ನು ನಾಯಿ ಚಿತ್ರದಂತೆ ತಿರುಚಿರುವ ಫೋಟೋದ ಜೊತೆಗೆ, ಪ್ರಧಾನಿಯಂತಯೇ ಕಾಣುವ ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ನಿಂತಿರುವ ಚಿತ್ರವನ್ನು ಎಐಬಿ ಪೋಸ್ಟ್ ಮಾಡಿತ್ತು.
ಎಐಬಿ ಈ ಪೋಸ್ಟ್ ಹಾಕುತ್ತಿದ್ದಂತೆಯೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು, ಅಲ್ಲದೆ, ಎಐಬಿ ವಿರುದ್ಧ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದರು.
ಇದರಿಂದ ತೀವ್ರ ಮುಜುಗರಕ್ಕೊಳಗಾದ ಎಐಬಿ, ಪ್ರಧಾನಿ ಮೋದಿಯವರ ಕುರಿತಾದ ಪೋಸ್ಟ್ ಅನ್ನೇ ತೆಗೆದು ಹಾಕಿದೆ.
ಹಾಸ್ಯ ಫೋಟೋ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮುಂಬೈ ಪೊಲೀಸರು, ಮೋದಿಯವರನ್ನು ಹಾಸ್ಯವಾಗಿ ಬಿಂಬಿಸಿದ ಎಐಬಿ ಪೋಸ್ಟ್'ನ್ನು ಗಮನಿಸಲಾಗಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆಗಾಗಿ ಪೋಸ್ಟ್'ನ್ನು ಸೈಬರ್ ವಿಭಾಗಕ್ಕೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.