ಹೈದರಾಬಾದ್: ಮಾದಕದ್ರವ್ಯ ದುರ್ಬಳಕೆಗೆ ಸಂಬಂಧಪಟ್ಟಂತೆ ತೆಲುಗು ಚಿತ್ರೋದ್ಯಮದ ಹತ್ತು ಮಂದಿಯನ್ನು ತನಿಖೆ ನಡೆಸಲು ಮುಂದಾಗಿರುವ ಪ್ರಕರಣ ರಾಜ್ಯದಲ್ಲಿ ಮತ್ತು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಇವರೆಲ್ಲರೂ ತೆಲುಗು ಚಿತ್ರರಂಗಕ್ಕೆ ಸೇರಿದವರಾಗಿದ್ದು, ಇಬ್ಬರು ನಟಿಯರನ್ನು ಹೊರತುಪಡಿಸಿ ಉಳಿದ 8 ಮಂದಿ ತೆಲಂಗಾಣ ಅಬಕಾರಿ ಇಲಾಖೆಯ ಮುಂದೆ ಇದೇ 19ರಿಂದ 27ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿದೆ.
ಚಿತ್ರೋದ್ಯಮದ ಪುರುಷರು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರೆ, ನಟಿಯರಿಗೆ ತಾವು ಇಚ್ಛಿಸಿದ ಬೇರೆ ಸ್ಥಳಗಳಲ್ಲಿ ವಿಚಾರಣೆಗೆ ಹಾಜರಾಗಲು ಅವಕಾಶವಿದೆ. ನಾರ್ಕಾಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ ಪ್ರಕಾರ ಈ 10 ಮಂದಿ ಮೇಲೆ ಆರೋಪ ಹೊರಿಸಲಾಗಿದೆ.
ವಿಶೇಷ ತನಿಖಾಧಿಕಾರಿಗಳ ಮುಂದೆ ಮಾತನಾಡಿದ ಓರ್ವ ನಟಿ, ತಾವು ಹಾಜರಾಗಲಿಚ್ಛಿಸುವ ತನಿಖಾ ಸ್ಥಳದ ಬಗ್ಗೆ ಸದ್ಯದಲ್ಲಿಯೇ ತಿಳಿಸುವುದಾಗಿ ಹೇಳಿದ್ದಾರೆ.
ಈ ಹತ್ತು ಮಂದಿ ಚಿತ್ರರಂಗದವರು ಮಾದಕ ವಸ್ತು ವ್ಯಾಪಾರಿಗಳಿಗೆ ಕರೆ ಮಾಡಿದ ಮತ್ತು ವಾಟ್ಸಾಪ್ ಸಂದೇಶ ಕಳುಹಿಸಿರುವ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಇದುವರೆಗೆ ತೆಲುಗು ಚಿತ್ರರಂಗದ 10 ಮಂದಿಗೆ ನೊಟೀಸ್ ಕಳುಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಈಗಾಗಲೇ ನೊಟೀಸ್ ಪಡೆದಿರುವ 10 ಮಂದಿಯಲ್ಲಿ ಒಬ್ಬ ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದು ಪ್ರತಿಷ್ಟಿತ ನಂದಿ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದ್ದಾರೆ. ಮತ್ತೊಬ್ಬರು 2006ರಲ್ಲಿ ಮಹೇಶ್ ಬಾಬು ನಟನೆಯ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದ ಮೂರು ಬಾರಿ ನಂದಿ ಪ್ರಶಸ್ತಿ ಗಳಿಸಿದ್ದ ಖ್ಯಾತ ನಿರ್ದೇಶಕರಾಗಿದ್ದಾರೆ.
ಇಬ್ಬರು ನಟಿಯರಲ್ಲಿ ಒಬ್ಬರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆಗೆ ನಟಿಸಿದ್ದಾರೆ. ಮತ್ತೊಬ್ಬರು ಐಟಂ ಹಾಡುಗಳ ನಟನೆಯಲ್ಲಿ ಗುರುತಿಸಿಕೊಂಡಿದ್ದು ಮುಂಬೈಯಲ್ಲಿ ನೆಲೆಸಿದ್ದಾರೆ. ಮತ್ತೊಬ್ಬ ಖ್ಯಾತ ಛಾಯಾಗ್ರಾಹಕರಿದ್ದಾರೆ.