ದೇಶ

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟದಿದ್ದರೆ ಹಜ್ ಯಾತ್ರೆಗೆ ತಡೆಯೊಡ್ಡುತ್ತೇವೆ; ಬಿಜೆಪಿ ಶಾಸಕ

Manjula VN
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಮುಸ್ಲಿಂ ಸಮಾಜದವರು ಬಿಡಲಿಲ್ಲ ಎಂದರೆ ಹಜ್ ಯಾತ್ರೆಗೆ ತೆರಳುವ ಮುಸ್ಲಿಮರನ್ನು ತಡೆಯುತ್ತೇವೆಂದು ಉತ್ತರಪ್ರದೇಶ ಬಿಜೆಪಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಗುಡುಗಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ 7 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆಗೊಳಿಸಿರುವ ಬ್ರಿಜ್ ಭೂಷಣ್ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟದಿದ್ದರೆ, ಮುಸ್ಲಿಮರಿಗೆ ಮೆಕ್ಕಾ ಮತ್ತು ಮದೀನಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. 
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಮುಸ್ಲಿಂ ಸಮಾಜದವರು ಅಡೆತಡೆ ಉಂಟುಮಾಡಿದರೆ, ಮುಸ್ಲಿಮರು ಮೆಕ್ಕಾ ಹಾಗೂ ಮದೀನಕ್ಕೆ ಹೋಗುವುದನ್ನು ತಡೆಯುವ ಕೆಲಸವನ್ನು ನಿಮ್ಮ ವಿಧಾಯಕ ಗುಡ್ಡು ರಾಜಪೂತ್ ಮಾಡಿಯೇ ತೀರುತ್ತಾನೆಂಬ ಹೇಳಿಕೆ ವಿಡಿಯೋದಲ್ಲಿರುವುದು ಕಂಡು ಬಂದಿದೆ. 
ಅಮರನಾಥ ಯಾತ್ರಾರ್ಥಿಗಳನ್ನು ಹತ್ಯೆ ಮಾಡುವ ಮೂಲಕ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಯತ್ನ ನಡೆಸಲಾಗುತ್ತಿದೆ. ನಮ್ಮ ಸರ್ಕಾರ ಅಂತಹ ಜನ ಮತ್ತು ದೇಶಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಹಾಗೆ ಮಾಡಿದಾಗ ಮಾತ್ರ ಹಿಂದೂ ಧರ್ಮದ ಕಡೆಗೆ ಯಾರೊಬ್ಬರೂ ಬೆರಳು ತೋರುವ ಧೈರ್ಯವನ್ನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಷದ ಯಾವುದೇ ನಾಯಕರು ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಿದ್ದರು. ಆದರೆ, ಇದೀಗ ಬ್ರಿಜ್ ಭೂಷಣ್ ಅವರು ಈ ರೀತಿಯ ಹೇಳಿಕೆ ನೀಡುವ ಮೂಲಕ ಸಿಎಂ ಯೋಗಿಯವರ ಎಚ್ಚರಿಕೆಯನನು ಉಲ್ಲಂಘನೆ ಮಾಡಿದಂತಾಗಿದೆ. 
SCROLL FOR NEXT