ದೇಶ

ಡೋಕ್ಲಾಮ್ ವಿವಾದ: ವಿಪಕ್ಷಗಳಿಗೆ ವಿವರಣೆ ನೀಡಿದ ಸರ್ಕಾರ

Manjula VN
ನವದೆಹಲಿ: ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವಣ ಉಂಟಾಗಿರುವ ಬಿಕ್ಕಟ್ಚಿನ ಕುರಿತಂತೆ ವಿರೋಧ ಪಕ್ಷ ಮತ್ತು ಮಿತ್ರ ಪಕ್ಷಗಳಿಗೆ ಸರ್ಕಾರ ಶುಕ್ರವಾರ ವಿವರಣೆ ನೀಡಿದೆ. 
ಸಭೆಯಲ್ಲಿ ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಹಾಗೂ ಕಾಶ್ಮೀರ ಪರಿಸ್ಥಿತಿ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಅರುಣ್ ಜೇಟ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಇನ್ನಿತರೆ ಉನ್ನತಾಧಿಕಾರಿಗಳು ವಿರೋಧ ಪಕ್ಷಗಳಿಗೆ ವಿವರಣೆ ನೀಡಿದರು. 
ಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿದಂತೆ ಒಟ್ಟು 14 ಪಕ್ಷಗಳ ನಾಯಕರು ಹಾಜರಿದ್ದರು. ಎಲ್ಲಾ ಪಕ್ಷದ ನಾಯಕರೂ ದೇಶದ ಭದ್ರತೆ ಅತ್ಯಂತ ಮುಖ್ಯವಾದದ್ದು ಎಂದು ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದರು. 
ಸಭೆ ಬಳಿಕ ಮಾತನಾಡಿದ ನಾಯಕರು, ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಸಮಸ್ಯೆ ಹಾಗೂ ಬಿಕ್ಕಟ್ಟುಗಳನ್ನು ರಾಜತಾಂತ್ರಿಕ ಮಾರ್ಗದ ಮೂಲಕವೇ ಬಗೆಹರಿಸಬೇಕಿದೆ. ಈ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆಗೆ ತರಲಾಗುತ್ತದೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ನಾಯಕ ಮಹೇಶ್ ಶರ್ಮಾ ಮಾತನಾಡಿ, ದೇಶದ ಭದ್ರತೆಯೇ ಪ್ರಮುಖವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ತಿಕ್ಕಾಟವನ್ನು ರಾಜತಾಂತ್ರಿಕ ಮೂಲಕವೇ ಬಗೆಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆಂದು ತಿಳಿಸಿದ್ದಾರೆ. 
ತೃಣಮೂಲಕ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರೇನ್ ಮಾತನಾಡಿ, ಸಭೆಯಲ್ಲಿ ನಮ್ಮ ಪಕ್ಷ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಅಂತಹ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆಗಳ ಕುರಿತಂತೆ ಸರ್ಕಾರದ ಬಳಿ ಉತ್ತರವೇ ಇರಲಿಲ್ಲ ಎಂದು ಹೇಳಿದ್ದಾರೆ. 
ಸೋಮವಾರದಿಂದ ಸಂಸತ್ತಿನಲ್ಲಿ ಅಧಿವೇಶನ ಆರಂಭಗೊಳ್ಳುತ್ತಿದ್ದು, ಅದಕ್ಕೂ ಮುನ್ನ ಚೀನಾ ಮತ್ತು ಕಾಶ್ಮೀರ ವಿಚಾರವಾಗಿ ಒಮ್ಮತ ಮೂಡಿಸಲು ಸರ್ಕಾರ ಸಭೆ ನಡೆಸಿ ವಿರೋಧ ಪಕ್ಷಗಳಿಗೆ ವಿವರಣೆಯನ್ನು ನೀಡಿದೆ. 
SCROLL FOR NEXT