ಶ್ರೀನಗರ: ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
47 ವರ್ಷದ ಲಲಿತಾ ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಲಲಿತಾ ಅವರನ್ನು ಶ್ರೀನಗರದ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಇಂದು ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ.
ಜು.10 ರಾತ್ರಿ 8.20 ಸುಮಾರಿಗೆ ಉಗ್ರರ ಗುಂಪೊಂದು ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ ನಡೆಸಿತ್ತು. ಬ್ಯಾಟೆಂಗೂ ಹಾಗೂ ಖಾನಾಬಾಲ್ ಗಳಲ್ಲಿ ಶಸ್ತ್ರಸಜ್ಜಿದ ಭಯೋತ್ಪಾದಕರ ಗುಂಪು ಪೊಲೀಸ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿತ್ತು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಸಿಲುಕಿಕೊಂಡಿತ್ತು. ಉಗ್ರರು ಮನೋಇಚ್ಛೆ ನಡೆಸಿದ್ದ ಗುಂಡಿನ ದಾಳಿಗೆ 7 ಯಾತ್ರಿಗಳು ಸಾವನ್ನಪ್ಪಿದ್ದರು.