ದೇಶ

ಶಶಿಕಲಾಗೆ ಜೈಲಿನಲ್ಲಿ ವಿಐಪಿ ಸೌಲಭ್ಯ: ತನಿಖೆಗೆ ಡಿಎಂಕೆ ಆಗ್ರಹ

Sumana Upadhyaya
ಚೆನ್ನೈ: ಅಣ್ಣಾ ಡಿಎಂಕೆಯ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಶಶಿಕಲಾ ಅವರಿಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ ನೀಡುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಬೇಕೆಂದು ದ್ರಾವಿಡ ಮುನ್ನೇತ್ರ ಕಳಗಂ ಒತ್ತಾಯಿಸಿದೆ.
ಭ್ರಷ್ಟಾಚಾರ, ಅಕ್ರಮ ಆಸ್ತಿ ಹಿನ್ನೆಲೆಯಲ್ಲಿ ಶಶಿಕಲಾ ಪ್ರಸ್ತುತ ಕೇಂದ್ರ ಕಾರಾಗೃಹದ ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿದ್ದಾರೆ.
ಕಾರಾಗೃಹ ವಿಭಾಗದ ಉಪ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ರೂಪಾ ಅವರು ಸಲ್ಲಿಸಿದ ವರದಿ ಆಘಾತವನ್ನುಂಟುಮಾಡಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಈ ಪ್ರಕರಣ ಕುರಿತು ಸಮಗ್ರ ತನಿಖೆಯ ಅಗತ್ಯವಿದೆ. ಆ ಬಳಿಕ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಡಿಎಂಕೆ ವಕ್ತಾರ ಶರವಣನ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ವಿರೋಧ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಪ್ರಕರಣ ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ. ಹಣದಿಂದ ಏನು ಬೇಕಾದರೂ ಮಾಡಬಹುದೆಂದು ಎಐಎಡಿಎಂಕೆ ಪಕ್ಷದವರು ನಂಬಿದ್ದಾರೆ ಎಂದರು.
ಶಶಿಕಲಾ ಅವರು ಈ ಹಿಂದೆ ಕೂಡ ಆರೋಗ್ಯವಿಲ್ಲವೆಂದು ಹೇಳಿ ಜೈಲಿನಲ್ಲಿರುವುದನ್ನು ತಪ್ಪಿಸಿಕೊಂಡಿದ್ದರು. ಈ ವಿಷಯ ಆಶ್ಚರ್ಯವನ್ನುಂಟುಮಾಡುತ್ತಿಲ್ಲ.ಹಣದಿಂದ ಜೈಲಿನಲ್ಲಿರುವುದನ್ನು ತಪ್ಪಿಸಬಹುದು ಎಂಬುದು ಎಐಎಡಿಎಂಕೆಯವರ ಮನೋಧರ್ಮವಾಗಿದೆ. ಇಂತಹ ವರ್ತನೆ ನಿಜಕ್ಕೂ ಆತಂಕಕಾರಿ ಎಂದು ಹೇಳಿದರು.
SCROLL FOR NEXT