ದೇಶ

ಕೋವಿಂದ್ ಆರಾಮವಾಗಿ ಗೆಲ್ಲುತ್ತಾರೆ: ಬಿಜೆಪಿ; ಮೀರಾ ಕುಮಾರ್ ಉತ್ತಮ ಆಯ್ಕೆ: ಪ್ರತಿಪಕ್ಷ

Lingaraj Badiger
ನವದೆಹಲಿ: ಭಾರತದ ನೂತನ ರಾಷ್ಟ್ರಪತಿ ಆಯ್ಕೆಯಾಗಿ ದೇಶಾದ್ಯಂತ ಶಾಸಕರು ಹಾಗೂ ಸಂಸದರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಆರಾಮವಾಗಿ ಗೆಲುವು ಸಾಧಿಸುತ್ತಾರೆ ಎಂದು ಆಡಳಿತರೂಢ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಸಿದ್ಧಾಂತಗಳ ಘರ್ಷಣೆ ವಿಚಾರದಲ್ಲಿ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರು ಉತ್ತಮ ಆಯ್ಕೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿದೆ.
ಕೋವಿಂದ್ ಅವರು ಗೌರವಯುತವಾಗಿ ಮತ್ತು ಅತ್ಯಂತ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಉಪ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಸಂಜೆ ನಿಗದಿಯಾಗಿರುವ ಬಿಜೆಪಿ ಸಂಸದೀಯ ಮಂಡಳಿಯ ಸಭೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ ಮೊದಲ ರಾಷ್ಟ್ರಪತಿ ಚುನಾವಣೆ ಮುಗಿಯಲಿ ಎಂದಿದ್ದಾರೆ.
ರಾಷ್ಟ್ರಪತಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ರಾಮನಾಥ್ ಕೋವಿಂದ್ ಅವರು ನಿರ್ಣಾಯಕ ಗೆಲುವು ಸಾಧಿಸಲಿದ್ದಾರೆ ಮತ್ತು ಅವರು ಒಬ್ಬ ಪ್ರಮಾಣಿಕ ರಾಷ್ಟ್ರಪತಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಸಿದ್ಧಾಂತಗಳ ಮೇಲೆ ಕೋವಿಂದ್ ಮತ್ತು ಕುಮಾರ್ ನಡುವೆ ಹೋರಾಟ ನಡೆಯುತ್ತಿದೆ. ಆದರೆ ರಾಷ್ಟ್ರಪತಿ ಸ್ಥಾನಕ್ಕೆ ಮೀರಾ ಕುಮಾರ್ ಅವರೇ ಉತ್ತಮ ಆಯ್ಕೆ ಎಂದಿದ್ದಾರೆ.
ರಾಷ್ಟ್ರಪತಿ ಚುನಾವಣೆಗಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಜುಲೈ 20ರಷ್ಟು ಫಲಿತಾಂಶ ಪ್ರಕಟಗೊಳ್ಳಲಿದೆ.
SCROLL FOR NEXT