ದೇಶ

ನಿಷೇಧಿತ ನೋಟ್ ಜಮೆ ಮಾಡಲು ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ

Lingaraj Badiger
ನವದೆಹಲಿ: ನಿಷೇಧಿತ 500 ಹಾಗೂ 1000 ರುಪಾಯಿ ನೋಟ್ ಗಳನ್ನು ಜಮೆ ಮಾಡಲು ಕೊನೆಯದಾಗಿ ಒಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್ ಸಕಾರಣದೊಂದಿಗೆ ಹಳೆ ನೋಟ್ ಗಳನ್ನು ಜಮೆ ಮಾಡಲು ಮತ್ತೊಂದು ಅವಕಾಶ ನೀಡುವ ಕುರಿತು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೆ ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶಿಸಿತ್ತು.
ಇಂದು ಪ್ರತಿಕ್ರಿಯೆ ಸಲ್ಲಿಸಿರುವ ಕೇಂದ್ರ ಸರ್ಕಾರ, ಒಂದು ವೇಳೆ ನಿಷೇಧಿತ ನೋಟ್ ಜಮೆ ಮಾಡಲು ಮತ್ತೊಂದು ಕಡೆಯ ಅವಕಾಶ ನೀಡಿದರೆ ನೋಟ್ ನಿಷೇಧದ ಉದ್ದೇಶ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಸೋಲಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಈ ಹಿಂದಿನ ಅವಧಿ ವಿಸ್ತರಣೆ ಅಥವಾ ವಿನಾಯಿತಿಗಳನ್ನು ದುರ್ಬಳಕೆಯಾಗಿದ್ದು, ಈಗ ಅಂತಹ ಅವಕಾಶ ನೀಡಿದರೆ ಬೆನಾಮಿ ಹಣ ಠೇವಣಿ ಮಾಡಲು ಅವಕಾಶ ನೀಡಿದಂತಾಗುತ್ತದೆ ಮತ್ತು ನಕಲಿ ವ್ಯಕ್ತಿಗಳಿಂದ ನೈಜ ಪ್ರಕರಣಗಳನ್ನು ಪ್ರತ್ಯೇಕಿಸಲು ಸರ್ಕಾರದ ಇಲಾಖೆಗಳಿಗೆ ಕಷ್ಟವಾಗಲಿದೆ ಎಂದು ಕೇಂದ್ರ ಹೇಳಿದೆ.
ನವೆಂಬರ್ 8ರಂದು ದಿಢೀರ್ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಲಾಗಿದೆ ಎಂದು ಘೋಷಿಸಿದ್ದರು.
SCROLL FOR NEXT