ದೇಶ

ಸಂಸತ್ ಅಧಿವೇಶನ: ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

Srinivasamurthy VN

ನವದೆಹಲಿ: ಮಾನ್ಸೂನ್ ಸಂಸತ್ ಅಧಿವೇಶನ ಸೋಮವಾರ ಆರಂಭವಾಗಿದ್ದು, ಇತ್ತೀಚೆಗೆ ಅಮರನಾಥ್ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿ ವೇಳೆ ಮೃತಪಟ್ಟವರಿಗ ಸಂತಾಪ ಸೂಚಿಸಿ ಉಭಯ ಕಲಾಪವನ್ನು ಮಂಗಳವಾರಕ್ಕೆ  ಮುಂದೂಡಿಕೆ ಮಾಡಲಾಗಿದೆ.

ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಮರನಾಥ್ ಯಾತ್ರೆ ಮೇಲಿನ ದಾಳಿಯನ್ನು ಒಕ್ಕೋರಲಿನಿಂದ ಖಂಡಿಸಲಾಗಿದ್ದು, ಅಂತೆಯೇ ದಾಳಿ ವೇಳೆ ಮೃತಪಟ್ಟ ಯಾತ್ರಾರ್ಥಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಅಂತೆಯೇ ಇತ್ತೀಚೆಗೆ ಅಗಲಿದ ಸಂಸತ್ ನ ಮಾಜಿ ಸದಸ್ಯರಿಗೂ ಗೌರವ ಸಲ್ಲಿಕೆ ಮಾಡಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

ಆಗಸ್ಟ್ 11ರವರೆಗೂ ಸಂಸತ್ ನ ಉಭಯ ಕಲಾಪಗಳು ನಡೆಯಲಿದ್ದು, ಕಾಶ್ಮೀರ ಹಿಂಸಾಚಾರ, ಡೊಕ್ಲಾಮ್ ವಿವಾದ, ಅಮರನಾಥ್ ಯಾತ್ರೆ ಮೇಲಿನ ದಾಳಿ, ಜಿಎಸ್ ಟಿ ಗೊಂದಲ, ಡಾರ್ಜಲಿಂಗ್ ಹಿಂಸಾಚಾರ ಸೇರಿದಂತೆ ವಿವಿಧ  ವಿಚಾರಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಹಣಿಯಲು ಚಿಂತನೆ ನಡೆಸಿವೆ. ಅಂತೆಯೇ ಕೇಂದ್ರ ಸರ್ಕಾರ ಕೂಡ ಗ್ರಾಹಕ ರಕ್ಷಣಾ ಮಸೂದೆ, ಜಮ್ಮುಮತ್ತು ಕಾಶ್ಮೀರದಲ್ಲಿ ಜಿಎಸ್ ಟಿ ಜಾರಿ ಕುರಿತ ಮಸೂದೆ  ಸೇರಿದಂತೆ ಒಟ್ಟು 16 ಹೊಸ ಮಸೂದೆಗಳಿಗೆ ಅನುಮೋದನೆ ಪಡೆಯಲು ಸರ್ಕಾರ ಕಾರ್ಯತಂತ್ರ ರೂಪಿಸಿದೆ.

ಒಟ್ಟಾರೆ ವಿಪಕ್ಷಗಳು ಗದ್ದಲಕ್ಕೆ ಸಿದ್ಧವಾಗಿದ್ದರೆ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತನ್ನದೇ ಆದ ಯೋಜನೆ ರೂಪಿಸಿಕೊಂಡಿದೆ. ತನ್ನ ಈ ಕಾರ್ಯದಲ್ಲಿ ಕೇಂದ್ರ ಸರ್ಕಾರ ಯಶ ಸಾಧಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT