ದೇಶ

ರಾಮನಾಥ ಕೋವಿಂದ್ ವರ್ಸಸ್ ಮೀರಾ ಕುಮಾರ್: ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭ

Srinivasamurthy VN

ನವದೆಹಲಿ: ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಹಾಗೂ ಎನ್ ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರ ನಡುವೆ ಜಿದ್ದಾ ಜಿದ್ದಿನ ಪೈಪೋಟಿ  ನಿರೀಕ್ಷಿಸಲಾಗತ್ತಿದೆ.

71 ವರ್ಷದ ರಾಮನಾಥ ಕೋವಿಂದ ಉತ್ತಮ ನಾಯಕರೆಂಬ ವರ್ಚಸ್ಸು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದಲ್ಲಿ ಪಾಂಡಿತ್ಯ ಹೊಂದಿರುವ ಕೋವಿಂದ್, ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ  ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಇವರು, ಈ ಹಿಂದೆ ಬಿಹಾರದ ರಾಜ್ಯಪಾಲರಾಗಿದ್ದರು. ಇನ್ನು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರ ವಿಚಾರಕ್ಕೆ ಬರುವುದಾದರೆ ಬಿಹಾರದಲ್ಲಿ ಜನಿಸಿದ ಮೀರಾ ಕುಮಾರ್ (72) ಸರಳ  ಹಾಗೂ ಸೌಜನ್ಯದ ವ್ಯಕ್ತಿತ್ವ ಹೊಂದಿದ್ದಾರೆ. ಉತ್ತಮ ನಾಯಕಿಯಾಗಿ ವರ್ಚಸ್ಸು ಪಡೆದಿದ್ದಾರೆ. ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮೀರಾ ಕುಮಾರ್ ಅವರು ಇಂಡಿಯನ್ ಫಾರಿನ್ ಸರ್ವಿಸ್​ನಲ್ಲಿ  ಸೇವೆ ಸಲ್ಲಿಸಿದ್ದರಿಂದ ವಿದೇಶ ನೀತಿಗಳ ಬಗ್ಗೆ ಅರಿವು ಹೊಂದಿದ್ದಾರೆ.

ದಲಿತ ನಾಯಕಿಯಾಗಿಯೂ ಮೀರಾ ಕುಮಾರ್ ಅವರು ಗುರುತಿಸಿಕೊಂಡಿದ್ದು, ಉಪಪ್ರಧಾನಿಯಾಗಿದ್ದ ಜಗಜೀವನರಾಮ್ ಅವರ ಮಗಳು ಎಂಬುದು ಮತ್ತೊಂದು ಹಿರಿಮೆ. ರಾಮವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯಂಥ  ದಿಗ್ಗಜ ನಾಯಕರಿಗೆ ಮೀರಾ ಕುಮಾರ್ ಅವರು ಚುನಾವಣೆಯಲ್ಲಿ ಸೋಲಿನ ರುಚಿ ಉಣಿಸಿದ್ದಾರೆ. ಕರೋಲ್​ಬಾಗ್ ಕ್ಷೇತ್ರದಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಇನ್ನು ಶೇ 63ರಷ್ಟು ಮತದಾರರರು ಬಿಹಾರದ ಮಾಜಿ ರಾಜ್ಯಪಾಲ ರಾಮನಾಥ ಕೋವಿಂದ್‌ ಅವರಿಗೆ ಈಗಾಗಲೇ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಅವರು ಆಯ್ಕೆಯಾಗುವುದು ಬಹುತೇಕ ಖಚಿತ. ಲೋಕಸಭೆಯ ಮಾಜಿ ಸಭಾಧ್ಯಕ್ಷೆ ಮೀರಾ ಕುಮಾರ್‌ ಅವರಿಗೆ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಿಪಿಎಂ, ಎಸ್‌ಪಿ, ಬಿಎಸ್‌ಪಿ, ಜೆಡಿಎಸ್‌ ಸೇರಿದಂತೆ 16 ಪಕ್ಷಗಳು ಬೆಂಬಲ ನೀಡಿವೆ.

ಈ ಮಧ್ಯೆ, ಮತದಾನಕ್ಕಾಗಿ ಸಂಸತ್‌ ಭವನ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಸಕಲ ಸಿದ್ಧತೆ ಮಾಡಲಾಗಿದ್ದು, ಬೆಳಗ್ಗೆಯಿಂದಲೇ ಮತದಾನ ಆರಂಭವಾಗಲಿದೆ.

ಸೋಮವಾರವೇ ನವದೆಹಲಿಗೆ
ಸಂಜೆ 5 ಗಂಟೆಗೆ ಚುನಾವಣೆ ಪ್ರಕ್ರಿಯೆ ಮುಗಿದ ತಕ್ಷಣವೇ ಮತಪೆಟ್ಟಿಗೆಯನ್ನು ನವದೆಹಲಿಗೆ ಕೊಂಡೊಯ್ಯಬೇಕು. ಅಂದೇ ಲೋಕಸಭಾ ಕಾರ್ಯದರ್ಶಿಯವರಿಗೆ ಒಪ್ಪಿಸಬೇಕು. ವಿಮಾನದ ಡಿಕ್ಕಿಯಲ್ಲಾಗಲಿ, ಲಗೇಜ್ ಜತೆಯಾಗಲಿ  ಇಡುವಂತಿಲ್ಲ. ಇದೇ ಕಾರಣಕ್ಕೆ ‘ಚುನಾವಣಾ ವೀಕ್ಷಕ, ನಾನು ಹಾಗೂ ಮತಪೆಟ್ಟಿಗೆ ಸೇರಿ ಮೂರು ಸೀಟ್ ಕಾಯ್ದಿರಿಸಲಾಗಿದೆ’ ಎಂದು ಎಸ್. ಮೂರ್ತಿ ತಿಳಿಸಿದ್ದಾರೆ.

ಪ್ರಾಶಸ್ತ್ಯ ಮತದಾನ

ರಾಷ್ಟ್ರಪತಿ ಸ್ಥಾನದ ಇಬ್ಬರು ಅಭ್ಯರ್ಥಿಗಳಿಗೂ ಪ್ರಾಶಸ್ತ್ಯ ಮತದಾನ ಮಾಡಲು ಅವಕಾಶವಿರುತ್ತದೆ. ಚುನಾವಣಾ ಆಯೋಗವೇ ನೀಡಿರುವ ಪೆನ್​ ನಲ್ಲಿ ಮತಪತ್ರದಲ್ಲಿ ಬರೆಯಬೇಕು. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ದೇಶದಲ್ಲಿ  ಸೂಚಿತ ಯಾವುದೇ ಭಾಷೆಯ ಅಂಕಿಯಲ್ಲೂ ಮೊದಲ ಪ್ರಾಶಸ್ತ್ಯ ಅಭ್ಯರ್ಥಿಗೆ 1, ಮತ್ತೊಬ್ಬರಿಗೆ 2 ಎಂದು ಬರೆಯಬಹುದು. 2ನೇ ಪ್ರಾಶಸ್ತ್ಯ ಮತ ಕಡ್ಡಾಯವಲ್ಲ. ಆದರೆ ಮೊದಲ ಪ್ರಾಶಸ್ತ್ಯ ನಮೂದಿಸದೇ ಕೇವಲ 2ನೇ ಪ್ರಾಶಸ್ತ್ಯ  ತಿಳಿಸಿದರೆ ಆ ಮತ ಮೌಲ್ಯ ಕಳೆದುಕೊಳ್ಳುತ್ತದೆ. ಎಲ್ಲ ಶಾಸಕರು ಹಾಗೂ ಸಂಸದರ ಮುಖ ಪರಿಚಯವಿರುವ ಕಾರಣ ಗುರುತಿನ ಚೀಟಿ ಕಡ್ಡಾಯ ಮಾಡಿಲ್ಲ. ಆದರೂ ಯಾವುದೇ ಗುರುತಿನ ಚೀಟಿ ತರುವುದು ಉತ್ತಮ ಎಂದು  ವೈಯಕ್ತಿಕವಾಗಿ ಎಲ್ಲರಿಗೂ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT