ಭಾರತ ಮತ್ತು ಚೀನಾ ಯೋಧರು (ಸಂಗ್ರಹ ಚಿತ್ರ)
ಕೋಲ್ಕತಾ: ಕಳೆದ 30 ದಿನಗಳಿಂದಲೂ ಸಿಕ್ಕಿಂ ಡೋಕ್ಲಾಮ್ ಗಡಿಯಲ್ಲಿ ಚೀನಾ ಸೇನೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೇನೆಯ ಸುಮಾರು 350ಕ್ಕೂ ಹೆಚ್ಚು ಯೋಧರು ಮಾನವ ಸರಪಳಿ ಸ್ವರೂಪದಲ್ಲಿ ಕಾವಲು ಕಾಯುತ್ತಿದ್ದಾರೆಂದು ತಿಳಿದುಬಂದಿದೆ.
ಕೆಲವೇ ಮೀಟರ್ ಗಳ ಅಂತರದಲ್ಲಿ 2 ಸಾಲುಗಳಲ್ಲಿ ನಿಂತಿರುವ ಭಾರತೀಯ ಯೋಧರು ಶಸ್ತ್ರಾಸ್ತ್ರ ಹೊಂದಿದ್ದಾರಾದರೂ, ಬಂದೂಕುಗಳನ್ನು ಕೆಳಮುಖವಾಗಿ ಹಿಡಿದಿದ್ದಾರೆಂದು ಹೇಳಲಾಗುತ್ತಿದೆ.
ನಾಥು ಲಾ ಪಾಸ್ ನಿಂದ ಕೇವಲ 15 ಕಿ.ಮೀ ದೂರದಲ್ಲಿನ ಪ್ರದೇಶದಲ್ಲಿ ಸುಮಾರು 500 ಮೀಟರ್ ಉದ್ದಕ್ಕೆ ಇಂತಹ ಸಾಲು ನಿಲ್ಲಿಸಲಾಗಿದೆ. ಜೂ.6 ರಿಂದ ಯೋಧರ ಈ ಸಾಲು ಈ ರೀತಿ ನಿಲ್ಲಿಸಲಾಗಿದೆ. ಚೀನಾ ಸೇನೆಯೂ ಇದೇ ಮಾದರಿಯಲ್ಲಿ ಯೋಧರ ಮಾನವ ಸರಪಳಿ ರೂಪಿಸಿದೆ. ಡ್ರೋನ್ ಪರಿಶೀಲನೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ ಎಂದು ವರದಿಗಳಿ ತಿಳಿಸಿವೆ.
ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಸುಧಾರಣೆಗೆ ರಾಜತಾಂತ್ರಿಕ ಸಂಪರ್ಕ ಸೇರಿದಂತೆ ಭಾರತ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆಯಾದರೂ, ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ ಎಂಬ ಮಾತುಗಳು ಕೇಳಿಬರತೊಡಗಿವೆ.
ಈ ಗಡಿ ಪ್ರದೇಶ ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿದ್ದು, ಇಲ್ಲಿ ಗಾಳಿ ವಿರಳವಾಗಿದೆ. ಪ್ರತಿ ಎರಡು ಗಂಟೆಗೊಮ್ಮೆ ಭಾರತೀಯ ಸೇನಾ ಸಿಬ್ಬಂದಿಗಳು ತಮ್ಮ ಪಾಳಿ ಬದಲಾಯಿಸಿಕೊಳ್ಳುತ್ತಾರೆ. ಈ ರೀತಿ ಮುಖಾಮುಖಿ ದಿನದುದ್ದಕ್ಕೂ ಮುಂದುವರಿಯುತ್ತದೆ. ಚೀನಾದ ಗುರಿ ಡೋಕ್ಲಾಂ ಜಾಂಫರಿ ರಿಡ್ಜ್ ಆಗಿದ್ದು, ಇಲ್ಲಿ ಹಿಡಿತ ಸಾಧಿಸಿದರೆ ಚೀನಾಕ್ಕೆ ಭಾರತದ ಈಶಾನ್ಯ ರಾಜ್ಯಗಳ ನಡುವೆ ಸಂಪರ್ಕ ಸಾಧಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ವರದಿಗಳು ತಿಳಿಸಿವೆ. ಡೋಕ್ಲಾಮ್ ನಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಯತ್ನಿಸಿರುವುದು ಉಭಯ ರಾಷ್ಟ್ರಗಳ ಯೋಧರ ನಡುವೆ ಘರ್ಷಣೆಗೆ ಕಾರಣವಾಗಿದೆ.