ದೇಶ

ಕುಲಭೂಷಣ್ ಜಾದವ್ ಗಲ್ಲು ಶಿಕ್ಷೆಯನ್ನು ಕೂಡ ರದ್ದುಗೊಳಿಸುವಂತೆ ಮನವಿ ಮಾಡಿದ್ದೆ: ಗೋಪಾಲ್ ಕೃಷ್ಣ ಗಾಂಧಿ

Srinivasamurthy VN

ನವದೆಹಲಿ: ಕುಲಭೂಷಣ್ ಜಾದವ್ ಗಲ್ಲು ಶಿಕ್ಷೆ ರದ್ದು ಮಾಡುವಂತೆ ಕೋರಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೂ ಪತ್ರ ಬರೆದಿದ್ದೆ ಎಂದು ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿ ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಪಾಲ್ ಕೃಷ್ಣ ಗಾಂಧಿ ಅವರು, ಮುಂಬೈ ಸ್ಫೋಟ ರೂವಾರಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ತಡೆ ಕೋರಿ ತಾವು ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂದೆ ಶಿವಸೇನೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಮಾತನಾಡಿದ ಅವರು, ಗಲ್ಲು ಶಿಕ್ಷೆ ಅಥವಾ ಮರಣ ದಂಡನೆ ಮಧ್ಯಕಾಲೀನ ಯುಗದ ಪ್ರಕ್ರಿಯೆಯಾಗಿದ್ದು, ನಾನು ಅದನ್ನು ಬಲವಾಗಿ ವಿರೋಧಿಸುತ್ತೇನೆ. ಕೇವಲ ಯಾಕೂಬ್ ಮೆಮನ್ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾದವ್ ಅವರ ಶಿಕ್ಷೆಯನ್ನೂ ರದ್ದುಗೊಳಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೂ ಪತ್ರ ಬರೆದಿದ್ದೆ ಎಂದು ಹೇಳಿದರು.

ನಾನೊಬ್ಬ ಸಾಮಾನ್ಯ ಪ್ರಜೆಯಷ್ಟೇ..ನಾನು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿಲ್ಲ. ನನ್ನ ಅಭಿಪ್ರಾಯ, ನಿರ್ಧಾರ ಮತ್ತು ದೃಷ್ಟಿಕೋನ ನನ್ನ ಸ್ವಂತದ್ಧೇ ವಿನಃ ಯಾವುದೇ ರಾಜಕೀಯ ಪಕ್ಷಗಳಿಂದ ಪ್ರೇರಿತವಾದದ್ದಲ್ಲ. ಮಹಾತ್ಮಾ ಗಾಂಧಿ ಮತ್ತು ಬಿಅರ್ ಅಂಬೇಡ್ಕರ್ ಅವರಿಂದ ನನ್ನ ಆಲೋಚನೆಗಳು ಸ್ಪೂರ್ತಿಯುತವಾಗಿದ್ದು, ಅಹಿಂಸೆ ಅವರ ನಿಲುವಾಗಿತ್ತು. ಅದನ್ನೇ ನಾನು ಪ್ರತಿಪಾದಿಸುತ್ತಿದ್ದೇನೆ. ರಾಜಕೀಯದಲ್ಲಿ ಒಂದಷ್ಟು ನ್ಯೂನ್ಯತೆಗಳಿವೆ. ಅದನ್ನು ನಾನು ಸರಿಪಡಿಸಲು ಪ್ರಯತ್ನಿಸುತ್ತೇನೆ. ಆದರೆ ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ವಿರೋಧಿಸಲು ಇಲ್ಲಿ ನಿಂತಿಲ್ಲ. ಜನತೆಯ ಆಕಾಂಕ್ಷೆ ಮೇರೆಗೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಗೋಪಾಲ ಕೃಷ್ಣ ಗಾಂಧಿ ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ ಗೋಪಾಲ ಕೃಷ್ಣ ಗಾಂಧಿ, ನಾವು ವಿಭಜನೆಯ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ವಿಭಜನೆ ನಮ್ಮ ಭವಿಷ್ಯಕ್ಕೆ ತುಂಬಾ ಅಪಾಯಕಾರಿಯಾಗಿದ್ದು,ರಾಜಕೀಯ ಮಾತ್ರವಲ್ಲ ದೇಶಕ್ಕೂ ಇದು ಅಪಾಯಕಾರಿ ಎಂದು ಗೋಪಾಲ ಕೃಷ್ಣ ಗಾಂಧಿ ಹೇಳಿದ್ದಾರೆ.

SCROLL FOR NEXT