ವಿದೇಶಾಂಗ ಕಾರ್ಯದರ್ಶಿ ಜೈಶಂಕರ್
ನವದೆಹಲಿ: ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಮೇಲಿನ ಹಕ್ಕು ವಿವಾದ ಸಂಬಂಧ ಚೀನಾ ಅನಾವಶ್ಯಕವಾಗಿ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಭಾರತ ಮಂಗಳವಾರ ಹೇಳಿದೆ.
ಡೋಕ್ಲಾಮ್ ವಿವಾದ ಸಂಬಂಧ ಸಂಸದೀಯ ಸಮಿತಿಗೆ ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು, ಡೋಕ್ಲಾಮ್ ವಿವಾದವನ್ನು ರಾಜತಾಂತ್ರಿಕ ಮಾರ್ಗ ಮೂಲಕ ಬಗೆಹರಿಸಲು ಭಾರತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ವಿವಾದ ಸಂಬಂಧ ಚೀನಾದ ಆಕ್ರಮಣಕಾರಿ ವರ್ತನೆ ಅನಾವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಸಂಸದೀಯ ಸಮಿತಿಯ ಈ ಸಭೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಸಮಿತಿ ಮುಖ್ಯಸ್ಥ ಶಶಿ ತರೂರ್, ಸಿಪಿಐ(ಎಂ) ಸಂಸದ ಮೊಹಮ್ಮದ್ ಸಲೀಂ, ಟಿಎಂಸಿ ಸಂಸದ ಸುಗಾತಾ ಬೋಸ್ ಮತ್ತು ಬಿಜೆಪಿ ಸಂಸದ ಶರದ್ ತ್ರಿಪಾಠಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿವಾದ ಸಂಬಂದ ಈಗಾಗಲೇ ಭಾರತ ತನ್ನ ನಿಲುವವನ್ನು ಸ್ಪಷ್ಟಪಡಿಸಿದೆ. ಚೀನಾ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ವಿವಾದ ಸಂಬಂಧ ಚೀನಾ ಇದೀಗ ತಪ್ಪು ಕಲ್ಪನೆಗಳನ್ನು ಸೃಷ್ಟಿಸುತ್ತಿದೆ. ಆದರೆ, ಭಾರತ ಇದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತದೆ. ಬ್ರಿಟೀಷ್-ಚೀನಾ ಒಪ್ಪಂದ ಕುರಿತು 1895ರಿಂದಲೂ ಭಾರತ ಒಂದೇ ನಿಲುವನ್ನು ಪ್ರದರ್ಶಿಸುತ್ತಿದೆ. ಅಂದಿನಿಂದ ಇಂದಿನವರೆಗೂ ಭಾರತದ ನಿಲುವು ಬದಲಾಗಿಲ್ಲ. ವಿವಾದ ಕುರಿತ ಚೀನಾ ಆಕ್ರಮಣಕಾರಿ ವರ್ತನೆ ಅನಾವಶ್ಯಕವಾಗಿದೆ. ವಿವಾದ ಬಗೆಹರಿಕೆಗೆ ಬಳಸಲಾಗುತ್ತಿರುವ ರಾಜತಾಂತ್ರಿಕ ಮಾರ್ಗಗಳನ್ನು ಭಾರತ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.