ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ
ನವದೆಹಲಿ: ಕಾಶ್ಮೀರ ವಿವಾದ ಬಗೆಹರಿಯಬೇಕಾದರೆ ಭಾರತ ಚೀನಾ ಮತ್ತು ಅಮೆರಿಕದಂತಹ ರಾಷ್ಟ್ರಗಳನ್ನು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಬೇಕೆಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಅವರು ಗುರುವಾರ ಹೇಳಿದ್ದಾರೆ.
ಕಾಶ್ಮೀರ ವಿವಾದ ಕುರಿತಂತೆ ಮಾತನಾಡಿರುವ ಅವರು, ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ಮಿತ್ರತ್ವವನ್ನು ಹೊಂದಿದೆ. ಹೀಗಾಗಿ ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಚೀನಾ ಹಾಗೂ ಅಮೆರಿಕದಂತಹ ರಾಷ್ಟ್ರಗಳೊಂದಿಗೆ ಮನವಿ ಮಾಡಬೇಕೆಂದು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಬಗೆಹರಿಸಲು ಎನ್ನೆಷ್ಟು ಕಾಲ ಕಾಯಬೇಕು? ಕೆಲವೊಮ್ಮೆ ಕೊಂಬುಗಳನ್ನು ಹಿಡಿದೇ ಗೂಳಿಗಳನ್ನು ಎಳೆಯಬೇಕಾಗುತ್ತದೆ. ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ಮಿತ್ರತ್ವವನ್ನು ಹೊಂದಿದೆ. ಅಂತಹ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಕಾಶ್ಮೀರ ವಿವಾದ ಸಂಬಂಧ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಬಹುದು. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕಾಶ್ಮೀರ ಸಮಸ್ಯೆ ಬಗೆಹರಿಯಬೇಕೆಂದು ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಚೀನಾ ಕೂಡ ಸಿದ್ಧವಿದ್ದೇವೆಂದು ಹೇಳಿದೆ ಎಂದು ಹೇಳಿದ್ದಾರೆ.
ಚೀನಾದೊಂದಿಗೆ ಭಾರತ ಮಾತುಕತೆ ನಡೆಸಿದ್ದೇ ಆದರೆ, ಯುದ್ಧದ ಅಗತ್ಯವಿರುವುದಿಲ್ಲ. ಚೀನಾ ರಾಷ್ಟ್ರವೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿದೆ ಎಂದಿದ್ದಾರೆ.
ಇದೇ ವೇಳೆ ಸ್ನೇಹಿತರಾದರೂ ಬದಲಾಗುತ್ತಾರೆ, ಆದರೆ, ನೆರೆಯವರು ಬದಲಾಗಲ್ಲ ಎಂಬ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಹೇಳಿಕೆಯನ್ನು ಉಲ್ಲೇಖಿಸಿರುವ ಫರೂಖ್, ಅಹಂಕಾರ ಹಾಗೂ ಮೊಂಡುತನದ ವರ್ತನೆಗಳು ಯಾವುದೇ ದೇಶದ ಪ್ರಗತಿ ಹಾಗೂ ಅಭಿವೃದ್ಧಿಯಾಗಲು ಬಿಡುವುದಿಲ್ಲ. ಸ್ನೇಹಿತರಾದರೂ ಬದಲಾಗುತ್ತಾರೆ, ಆದರೆ, ನೆರೆಯವರು ಬದಲಾಗಲ್ಲ ಎಂಬ ವಾಯಪೇಯಿಯವರ ಹೇಳಿಕೆಯನ್ನು ಈ ವೇಳೆ ಸ್ಮರಿಸಬೇಕಿದೆ. ಮಿತ್ರತ್ವವನ್ನು ಮುಂದುವರೆಸಬೇಕಾದರೆ ಒಬ್ಬರಾದರೂ ಮುಂದಕ್ಕೆ ಹೆಜ್ಜೆಯನ್ನು ಇಡಬೇಕು. ಇಲ್ಲವೇ, ಶತ್ರುಗಳಾಗುವ ಮೂಲಕ ಅವರನ್ನು ಹಿಮ್ಮೆಟ್ಟಿಸಬೇಕು.
ಮುಂದಿನ ಯುವ ಪೀಳಿಕೆಯನ್ನು ಇಂದು ಗುರಿ ಮಾಡುತ್ತಿದ್ದರೆ, ಮುಂದೆ ದೇಶ ನಡೆಯುವುದಾದರೂ ಹೇಗೆ? ದುಷ್ಕರ್ಮಿಗಳನ್ನು ಮಟ್ಟ ಹಾಕುವಂತೆ ಈಮೂಲಕ ನಾನು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಪ್ರತೀನಿತ್ಯ ಒಬ್ಬರಲ್ಲ ಒಬ್ಬರು ಸಾವನ್ನಪ್ಪುತ್ತಿದ್ದಾರೆಂದು ತಿಳಿಸಿದ್ದಾರೆ.