ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಕಾಶ್ಮೀರದ ವಿಚಾರದಲ್ಲಿ 3ನೇ ರಾಷ್ಟ್ರದ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಬೇಕೆಂಬ ಫರೂಖ್ ಅವರ ಹೇಳಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ಕಾಶ್ಮೀರ ವಿವಾದ ಸಂಬಂಧ ಫರೂಖ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತವೆಂದರೆ ಕಾಶ್ಮೀರ, ಕಾಶ್ಮೀರವೆಂದರೆ ಭಾರತ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರದಲ್ಲಿರುವ ಅವರ ನೀತಿಗಳು ಜಮ್ಮು ಮತ್ತು ಕಾಶ್ಮೀರವನ್ನು ನಾಶ ಮಾಡುತ್ತಿದೆ. ಕಾಶ್ಮೀರದ ವಿವಾದ ಸಂಬಂಧ ಇದೀಗ 3ನೇ ರಾಷ್ಟ್ರ ಮಧ್ಯಸ್ಥಿಕೆ ವಹಿಸಬೇಕೆಂಬ ಹೇಳಿಕೆಗಳು ಕೇಳಿಬರತೊಡಗಿದೆ. ಇದು ನಿಜಕ್ಕೂ ತಪ್ಪು. ಭಾರತವೆಂದರೆ ಕಾಶ್ಮೀರ, ಕಾಶ್ಮೀರವೆಂದರೆ ಭಾರತ.
ಕಾಶ್ಮೀರ ವಿವಾದ ನಮ್ಮ ಆಂತರಿಕ ವಿಚಾರ. ಈ ವಿಚಾರದಲ್ಲಿ ಮೂರನೇ ರಾಷ್ಟ್ರ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ. ಯಾವುದೇ ರಾಷ್ಟ್ರ ಇದರಲ್ಲಿ ಏನನ್ನೂ ಹೇಳಬೇಕಿಲ್ಲ ಎಂದು ತಿಳಿಸಿದ್ದಾರೆ.