ಲಖನೌ: ಭೂಗತ ಪಾತಕಿ ಛೋಟಾ ರಾಜನ್ ನ ಶಾರ್ಪ್ ಶೂಟರ್ ಖಾನ್ ಮುಬಾರಕ್ ನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಜು.22 ರಂದು ಬಂಧಿಸಿದ್ದಾರೆ.
ಲೂಟಿ ನಡೆಸಲು ಮುಬಾರಕ್ ಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ಪಡೆದ ವಿಶೇಷ ಕಾರ್ಯಪಡೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮುಬಾರಕ್ ಹಾಗೂ ಆತನ ಸಹಚರರು ಲೂಟಿ ನಡೆಸಲು ಸಂಚು ರೂಪಿಸಿದ್ದರು. ಈ ಬಗ್ಗೆ ಸರಿಯಾದ ಸಮಯಕ್ಕೆ ಮಾಹಿತಿ ಪಡೆದು ಬಂಧಿಸಿದ್ದೇವೆ ಎಂದು ಡಿಐಜಿ ಮನೋಜ್ ತಿವಾರಿ ಹೇಳಿದ್ದಾರೆ.
ಮುಬಾರಕ್ ವಿರುದ್ಧ ಸುಲಿಗೆ ಪ್ರಕರಣಗಳು, ಅಕ್ರಮ ಭೂ ವ್ಯವಹಾರಗಳ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಬಾರಕ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತ ಅಬು ಸಲೇಂ ಜೊತೆಗೂ ಸಂಪರ್ಕ ಹೊಂದಿದ್ದ ಎಂದು ತಿವಾರಿ ಹೇಳಿದ್ದಾರೆ.
ಲಖನೌ ನಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಯತ್ನಿಸಿ ಇದಕ್ಕಾಗಿ ತನ್ನದೇ ತಂಡವನ್ನು ತಯಾರಿಸುತ್ತಿದ್ದ ಮುಬಾರಕ್ ನ್ನು ದಾವೂದ್ ಇಬ್ರಾಹಿಂ ನ ವೈರಿಯೆಂದು ಹೇಳಲಾಗುತ್ತದೆ. ಭೂಗತ ಪಾತಕಿ ಛೋಟಾ ರಾಜನ್ ನ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಮುಬಾರಕ್ ರಾಜನ್ ಗ್ಯಾಂಗ್ ನ ಶೂಟರ್ ಗಳ ಉಸ್ತುವಾರಿಯಾಗಿದ್ದ.