ದೇಶ

ಹುರಿಯತ್ ನಾಯಕರಿಗೆ ಪಾಕ್ ನಿಂದ ಮಾತ್ರವಲ್ಲ, ಭಾರತದಿಂದಲೂ ಹಣ ಸಂದಾಯ: ಫಾರೂಕ್ ಅಬ್ದುಲ್ಲಾ

Srinivasamurthy VN

ನವದೆಹಲಿ: ಹುರಿಯತ್ ನಾಯಕರಿಗೆ ಕೇವಲ ಪಾಕಿಸ್ತಾನದಿಂದ ಮಾತ್ರವಲ್ಲ ಭಾರತ ಸರ್ಕಾರದಿಂದಲೂ ಹಣ ಸಂದಾಯವಾಗುತ್ತಿದೆ ಎಂದು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಗಂಭೀರ ಆರೋಪ ಮಾಡಿದ್ದಾರೆ.

ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದಡಿಯಲ್ಲಿ ಹುರಿಯತ್ ನಾಯಕರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು, ಹುರಿಯತ್  ನಾಯಕರಿಗೆ ಪಾಕಿಸ್ತಾನದಿಂದ ಮಾತ್ರವಲ್ಲ ಭಾರತ ಸರ್ಕಾರದಿಂದಲೂ ಹಣ ಸಂದಾಯವಾಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಾನು ಹೆಸರು ಹೇಳಲು ಇಚ್ಛಿಸುವುದಿಲ್ಲ. ಆದರೆ ಹುರಿಯತ್ ನಾಯಕರಿಗೆ ಭಾರತ ಸರ್ಕಾರದಿಂದಲೂ ಹಣ ಸಂದಾಯವಾಗುತ್ತಿದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಭಾರತದ ಗುಪ್ತಚರ ಸಂಸ್ಥೆ "ರಾ"ದ ಮಾಜಿ ಮುಖ್ಯಸ್ಥ ದುಲತ್  ಅವರ ಪುಸ್ತಕವನ್ನು ಓದಿ..ಅದರಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಇದೆ. ನನ್ನ ಅಭಿಪ್ರಾಯದಂತೆ ಉಭಯ ದೇಶಗಳ ನಡುವೆ ಅಂದರೆ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ದ್ವಿಪಕ್ಷೀಯ ಚರ್ಚೆ ಪುನಃ ಆರಂಭವಾಗುವವರೆಗೂ  ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಸಮಸ್ಯೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ದ್ವಿಪಕ್ಷೀಯ ಮಾತುಕತೆಗೆ ಉಭಯ ದೇಶಗಳ ಪ್ರಧಾನಿಗಳೇ ಪಾಲ್ಗೊಳ್ಳಬೇಕು ಎಂದೇನಿಲ್ಲ..ಸಂಸದೀಯ ಸಮಿತಿಯನ್ನು ಕೂಡ ಕಳುಹಿಸಿಕೊಡಬಹುದು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲಾಂಯಂ ಸಿಂಗ್  ರಂತಹ ವಿಶೇಷ ವ್ಯಕ್ತಿಗಳನ್ನು ಕೂಡ ಕಳುಹಿಸಿಕೊಡಬಹುದು ಎಂದು ಫಾರೂಕ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.

SCROLL FOR NEXT