ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಕೋಲ್ಕತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು ಮಂಗಳವಾರ ಕ್ಷಮಾಧಾನ ಕೋರಿ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಸದ್ಯ ಜೈಲಿನಲ್ಲಿರುವ ವಿವಾದಾತ್ಮ ನಿವೃತ್ತ ನ್ಯಾಯಮೂರ್ತಿ ತಮ್ಮ ವಕೀಲ ಮ್ಯಾಥ್ಯೂಸ್ ಜೆ ನೆಡುಂಪರಾ ಅವರ ಮೂಲಕ ಇಂದು ನೂತನ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕರ್ಣನ್ ಅವರು ಇತ್ತೀಚೆಗೆ ತಮ್ಮ ಜೈಲು ಶಿಕ್ಷೆ ರದ್ದು ಕೋರಿ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದರು. ಆ ಅರ್ಜಿಯ ಬಗ್ಗೆ ಇನ್ನೂ ರಾಜ್ಯಪಾಲರು ನಿರ್ಧಾರ ಕೈಗೊಂಡಿಲ್ಲ. ಅದಕ್ಕೂ ಮೊದಲೇ, ಈಗ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.
ತಮಗೆ ವಿಧಿಸಿರುವ 6 ತಿಂಗಳ ಜೈಲು ಶಿಕ್ಷೆಯನ್ನು ಹಿಂಪಡೆಯಬೇಕು ಎಂದು ಕೋರಿ ನ್ಯಾ. ಕರ್ಣನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೇ 19ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ ನ್ಯಾ. ಕರ್ಣನ್ ಸಲ್ಲಿಸಿರುವ ಅರ್ಜಿ ಸಮರ್ಥನೀಯವಾಗಿಲ್ಲ ಎಂದು ಹೇಳಿತ್ತು.
ಕಳೆದ ಫೆಬ್ರವರಿ 8ರಂದು ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ನ್ಯಾಯಮೂರ್ತಿ ಕರ್ಣನ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಮೇ 9ರಂದು ನ್ಯಾ,ಕರ್ಣನ್ ಅವರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು.