ನವದೆಹಲಿ: ಕಂದಾಯ ಇಲಾಖೆ ಕಡತಗಳ ವಿಲೇವಾರಿ ಮಾಡಲು ವಿಳಂಬ ಮಾಡುವ ಅಧಿಕಾರಿಗಳನ್ನು ತಲೆಕೆಳಗೆ ಮಾಡಿ ನೇತು ಹಾಕುವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.
ಭೂಪಾಲ್ ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿವಾದವಿಲ್ಲದ ಕಂದಾಯ ವಿಷಯಗಳ ಕಡತಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ವಿಲೇವಾರಿ ಮಾಡದೇ ಇದ್ದದ್ದು ಕಂಡು ಬಂದರೆ ಅಧಿಕಾರಿಗಳನ್ನು ತಲೆ ಕೆಳಗೆ ಮಾಡಿ ನೇತು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಂದೇಲುಖಂಡದಿಂದ ಬಂದಿದ್ದ ಪಕ್ಷದ ಮುಖಂಡರು ರೆವಿನ್ಯೂ ವಿಷಯದ ಕೆಲ ಕಡತಗಳನ್ನು ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ, ಹೀಗಾಗಿ ಸಿಎಂ ಮದ್ಯಪ್ರವೇಶಿಸಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ಸಿಎಂ ಚೌಹಾಣ್ ಈ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳ ವಿರುದ್ಧ ಕಠಿಣ ಪದ ಬಳಸಿರುವುದಕ್ಕೆ ಕಾಂಗ್ರೆಸ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದೆ. ಇದಕ್ಕೆ ಸಮರ್ಥನೆ ನೀಡಿರುವ ಬಿಜೆಪಿ ವಕ್ತಾರ ರಜನೀಶ್ ಅಗರ್ ವಾಲ್ ಮುಖ್ಯಮಂತ್ರಿಗಳು ರೈತರ ವಿಷಯದಲ್ಲಿ ಗಂಭೀರವಾದ ನಿಲುವು ತಳೆದಿದ್ದಾರೆ. ರೈತರ ಕಂದಾಯ ಕೇಸ್ ಗಳನ್ನು ಬಗೆ ಹರಿಸದೇ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರ ಎಂದು ಹೇಳಿದ್ದಾರೆ.