ನವದೆಹಲಿ: ಖಾಸಗಿತನದ ಹಕ್ಕನ್ನು ಸಂವಿಧಾನದಡಿ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ನಾಲ್ಕು ರಾಜ್ಯಗಳು ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿವೆ.
ಖಾಸಗಿತನದ ಹಕ್ಕು ಮೂಲಭೂತ ಹಕ್ಕೆ ಎಂಬುದರ ಕುರಿತು ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೆಹರ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ವಿಚಾರಣೆ ನಡೆಸುತ್ತಿದ್ದು, ಖಾಸಗಿತನ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ, ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಪುದುಚೇರಿ ರಾಜ್ಯಗಳ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಇಂದು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ತಂತ್ರಜ್ಞಾನ ಆಧುನೀಕರಣಗೊಂಡಿರುವ ಕಾಲಘಟ್ಟದಲ್ಲಿ ‘ಖಾಸಗಿ ಹಕ್ಕು’ ಕುರಿತಾಗಿ ಕೋರ್ಟ್ ಮತ್ತೊಮ್ಮೆ ಪರಾಮರ್ಶಿಸಬೇಕೆಂದು ನಾಲ್ಕು ರಾಜ್ಯಗಳು ಮನವಿ ಮಾಡಿವೆ. ಅಲ್ಲದೆ ಆಧಾರ್ ಗುರುತು ಚೀಟಿ ಮೂಲಕ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿ ಸೇರಿದಂತೆ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಹಂಚುವುದು ಖಾಸಗಿತನದ ’ಮೂಲಭೂತ’ ಹಕ್ಕು ಉಲ್ಲಂಘಿಸಿದಂತೆ ಆಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕಾಗಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಸಂವಿಧಾನದಲ್ಲಿ ಖಾಸಗಿತನ ಮೂಲಭೂತ ಹಕ್ಕಾಗಿದೆಯೇ ಎಂಬುದರ ಕುರಿತು ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ‘ಖಾಸಗಿತನದ ಹಕ್ಕು ಪರಿಪೂರ್ಣ ಅಲ್ಲ, ಈ ಹಕ್ಕಿನ ಮೇಲೆ ಸರ್ಕಾರ ನ್ಯಾಯಯುತ ನಿರ್ಬಂಧ ಹೇರುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದಿತ್ತು.
ಆಧಾರ್ ನೋಂದಣಿಗಾಗಿ ದೇಹಕ್ಕೆ ಸಂಬಂಧಿಸಿದ ಮಾಹಿತಿಗಳನ್ನೂ ನೀಡಬೇಕಾಗುತ್ತದೆ. ಇದು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿಯ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.