ದೇಶ

ಕಾರ್ಗಿಲ್'ನಂತಹ ಪರಿಸ್ಥಿತಿ ಮತ್ತೆಂದೂ ಮರುಕಳುಹಿಸದು: ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು

Manjula VN
ದ್ರಾಸ್ (ಜಮ್ಮು-ಕಾಶ್ಮೀರ): ದೇಶದಲ್ಲಿ ಕಾರ್ಗಿಲ್'ನಂತಹ ಪರಿಸ್ಥಿತಿ ಮತ್ತೆಂದು ಮರುಕಳುಹಿಸುವುದಿಲ್ಲ ಎಂದು ಉತ್ತರ ಸೇನಾವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರು ಬುಧವಾರ ಹೇಳಿದ್ದಾರೆ. 
18ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ದ್ರಾಸ್'ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 1999 ಕಾರ್ಗಿಲ್ ಯುದ್ಧದ ವಿಜಯೋತ್ಸವ ಭಾರತೀಯ ಸೇನಗೆ ಹೆಮ್ಮೆಯ ದಿನವಾಗಿದೆ. 1999ರಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಪಾಕಿಸ್ತಾನದ ನುಸುಳುಕೋರರು ಭಾರತದೊಳಗೆ ಪ್ರವೇಶಿಸಲು ಯತ್ನ ನಡೆಸಿದ್ದರು. ಈ ವೇಳೆ ಭಾರತೀಯ ಸೇನೆ ದಿಟ್ಟ ಹೋರಾಟ ಮಾಡಿ ತ್ಯಾಗ ಹಾಗೂ ಬಲಿದಾನದ ಜೊತೆಗೆ ನುಸುಳುಕೋರರನ್ನು ಹಿಮ್ಮೆಟ್ಟಿಸಿದ್ದರು ಎಂದು ಹೇಳಿದ್ದಾರೆ. 
ಪ್ರತೀ ವರ್ಷ ಜುಲೈ.20 ರಿಂದ 26ರವರೆಗೂ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಯೋಧರ ಗೆಲವು ಹಾಗೂ ಅವರ ತ್ಯಾಗವನ್ನು ನೆನೆಯಲಾಗುತ್ತದೆ ಎಂದು ತಿಳಿಸಿದ್ದಾರೆ. 
ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಯಲ್ಲಿ ಉತ್ತಮ ರೀತಿಯಲ್ಲಿ ಕಣ್ಗಾವಲಿರಿಸಲಾಗಿದೆ. ಪ್ರತೀ ವರ್ಷ ಸೇನಾ ಯೋಧರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದಿದ್ದಾರೆ. 
ನಂತರ ಉಗ್ರರ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಕುರಿತಂತೆ ಮಾತನಾಡಿದ ಅವರು, ಗಡಿ ನುಸುಳುವ ಯತ್ನಗಳಿಗೆ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ. ಹೀಗಾಗಿಯೇ ನಾವು ಗಡಿ ಮೇಲೆ ನಿಯಂತ್ರಣವನ್ನು ಹೊಂದಿದ್ದೇವೆ. ಗಡಿ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಕಳೆದ ಮೂರು ತಿಂಗಳಿನಲ್ಲಿ 36 ನುಸುಳುಕೋರರನ್ನು ಹತ್ಯೆ ಮಾಡಿದ್ದೇವೆ. ಆದರೂ, ನುಸುಳುಕೋರರರು ತಮ್ಮ ಯತ್ನಗಳನ್ನು ಕೈಬಿಟ್ಟಿಲ್ಲ. ಆದರೆ, ಸೇನೆ ಅವರನ್ನು ಹಿಮ್ಮೆಟ್ಟಿಸದೆ ಬಿಡುವುದಿಲ್ಲ.
ಉಗ್ರರನ್ನು ಸದೆಬಡಿಯಲು ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್'ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ. 
ನಂತರ ಡೋಕ್ಲಾಮ್ ವಿವಾದ ಕುರಿತಂತೆ ಮಾತನಾಡಿರು ಅವರು, ಪೂರ್ವ ಲಡಾಖ್ ನಲ್ಲಿ ಚೀನಾದೊಂದಿಗೆ ಯಾವುದೇ ಸಮಸ್ಯೆಗಳಿಲ್ಲ. ಚೀನಾದೊಂದಿಗಿನ ಗಡಿ ವಿಚಾರಕ್ಕೆ ಬಂದರೆ, ಇದೊಂದು ಗಡಿ ಬಿಕ್ಕಟ್ಟಾಗಿದೆ. ಗಡಿಯಲ್ಲಿ ಯಾವ ರೇಖೆಯೂ ಇಲ್ಲ. ಗಡಿ ರೇಖೆ ಬಗ್ಗೆ ನಾವು ನಮ್ಮದೇ ಆದ ಗ್ರಹಿಕೆಗಳನ್ನು ಹೊಂದಿದ್ದೇವೆ. ಆದರೆ, ಗಡಿಯಲ್ಲಿ ಶಿಷ್ಟಾಚಾರ ಹಾಗೂ ನಿಯಮಗಳನ್ನು ಪಾಲನೆ ಮಾಡುತ್ತಿರುವುದರಿಂದ ಪೂರ್ವ ಲಡಾಖ್ ನಲ್ಲಿ ಶಾಂತಿಯುತ ವಾತಾವರಣವಿದೆ ಎಂದಿದ್ದಾರೆ. 
SCROLL FOR NEXT