ಅಹಮದಾಬಾದ್: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗುಜರಾತ್ ನಲ್ಲಿ ಒಂದೇ ಕುಟುಂಬದ 17 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಇದರೊಂದಿಗೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಜರಾತ್ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪೀಡಿದ ಗುಜರಾತ್ ನಲ್ಲಿ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್'ಡಿಆರ್'ಎಫ್), ಬಿಎಸ್ಎಫ್ ಪಡೆ, 10 ಸೇನಾ ಹೆಲಿಕಾಪ್ಟರ್ ಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಈ ವರೆಗೂ 460 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಗುಜರಾತ್ ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ವೀಕ್ಷಣೆ ನಡೆಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯರಾಗಿ ಭಾಗಿಯಾಗುವಂತೆ ಬಿಜೆಪಿ ಸಂಸದರಿಗೆ ಕರೆ ನೀಡಿದ್ದಾರೆ. ಮತ್ತೊಂದೆಡೆ, ಪ್ರವಾಹ ಪೀಡಿದ ಅಸ್ಸಾಂ ಹೆದ್ದಾರಿ ದುರಸ್ಥಿಗೆ ರೂ.200 ಕೋಟಿ ಅನುದಾನ ನೀಡುವುದಾಗಿ ಸಚಿವ ನಿತಿನ್ ಗಡ್ಕರಿಯವರು ಘೋಷಣೆ ಮಾಡಿದ್ದಾರೆ.