ದೇಶ

8 ವರ್ಷಗಳಿಂದ ಭದ್ರತಾ ತಪಾಸಣೆಗೆ ಒಳಪಡದೆ ಏರ್ ಪೋರ್ಟ್ ಪ್ರವೇಶಿಸುತ್ತಿದ್ದ ಲಾಲು ದಂಪತಿ!

Shilpa D
ನವದೆಹಲಿ: ಕೇವಲ 30 ವರ್ಗಗಳ ಉನ್ನತ ಮಟ್ಟದ ವಿವಿಐಪಿಗಳಿಗೆ  ವಿಮಾನ ನಿಲ್ದಾಣದಲ್ಲಿ ನೀಡಿದ್ದ ಭದ್ರತಾ ತಪಾಸಣೆ ವಿನಾಯಿತಿಯನ್ನು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕಳೆದ 8 ವರ್ಷಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ. ಲಾಲು ದಂಪತಿಯ ಈ ವಿಶೇಷ ಸೌಲಭ್ಯಕ್ಕೆ ಕಳೆದ ವಾರ ಫುಲ್ ಸ್ಟಾಪ್ ಬಿದ್ದಿದೆ.
2009 ರಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅತಿ ಗಣ್ಯರಿಗೆ ನೀಡಲಾಗುವ ಭದ್ರತಾ ತಪಾಸಣೆ ವಿನಾಯಿತಿ ಮತ್ತು ವಿಮಾನ ನಿಲ್ದಾಣದ ಹತ್ತಿರ ವಾಹನ ಕೊಂಡೊಯ್ಯುವ ರಿಯಾಯಿತಿಯನ್ನು ಲಾಲು ದಂಪತಿಗೆ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಿಂದ ರಿಯಾಯಿತಿ ಪಡೆಯುವ ಅತಿ ಗಣ್ಯರ ಪಟ್ಟಿಯಲ್ಲಿ ಇವರ ಹೆಸರು ಇಲ್ಲದೇ ಇದ್ದರೂ 
ಕಳೆದ 8 ವರ್ಷಗಳಿಂದಲೂ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ಡಿ ದೇವಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಈ ವಿಶೇಷ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದರು. ವಿಮಾನ ಏರುವ ಏಣಿಯವರೆಗೂ ವಾಹನ ಬಳಸುತ್ತಿದ್ದರು ಹಾಗೂ ಯಾವುದೇ ಸೆಕ್ಯೂರಿಟಿ ಚೆಕಿಂಗ್ ಗೂ ಒಳಪಡದೇ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದರು.  ಅವರ ಹ್ಯಾಂಡ್ ಬ್ಯಾಗ್ ಗಳು ತಪಾಸಣೆಗೊಳಪಡದೇ ನೇರವಾಗಿ ಕಾರಿನಿಂದ ವಿಮಾನಕ್ಕೆ ತಲುಪುತ್ತಿದ್ದವು ಎಂದು ಬ್ಯೂರೋ ಆಫ್ ಸಿವಿಲ್ ಏವಿಯೇಶನ್ ಗೆ ಕಳೆದ ಶುಕ್ರವಾರ ದೂರು ಸಲ್ಲಿಸಲಾಗಿತ್ತು.
ದೂರು ಸ್ವೀಕರಿಸಿರುವ ಬಿಸಿಎಎಸ್ ಮುಖ್ಯಸ್ಥ ರಾಜೇಶ್ ಕುಮಾರ್ ಚಂದ್ರ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಇ ಮೇಲ್ ಮಾಡಿ ವಿವರಣೆ ಕೇಳಿದ್ದಾರೆ. ಜೊತೆಗೆ  ವಿಮಾನಯಾನ ಕಾರ್ಯದರ್ಶಿ ಆರ್ ಎನ್ ಚೌಬೆ ಅವರಿಗೆ ಪತ್ರ ಬರೆದು ಕೂಡಲೇ ಲಾಲು ದಂಪತಿಗೆ ನೀಡುತ್ತಿರುವ ಸೌಲಭ್ಯವನ್ನು ರದ್ದುಗೊಳಿಸುವಂತೆ ತಿಳಿಸಿದ್ದಾರೆ.  ಲಾಲು ದಂಪತಿ ಮತ್ತು ಅವರ ಲಗ್ಗೇಜ್ ಅನ್ನು ವಿಮಾನ ನಿಲ್ದಾಣದಲ್ಲಿ  ಎಲ್ಲಾ ರೀತಿಯ ಭದ್ರತಾ ತಪಾಸಣೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ. 
SCROLL FOR NEXT