ಲೋಕಸಭೆಯಲ್ಲಿಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ 
ದೇಶ

ಗೋ ರಕ್ಷಕರಿಗೆ ಕೇಂದ್ರ ಸರ್ಕಾರ ಪರೋಕ್ಷ ಬೆಂಬಲ: ಮಲ್ಲಿಕಾರ್ಜುನ ಖರ್ಗೆ ಆರೋಪ

ಗೋ ರಕ್ಷಕರಿಗೆ ಕೇಂದ್ರ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿದೆ. ಗೋ ರಕ್ಷಣೆ ಹೆಸರಿನಲ್ಲಿ ದೇಶಾದ್ಯಂತ ಗಲಭೆ, ಹಿಂಸೆ, ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ವಿಶ್ವ ಹಿಂದೂ...

ನವದೆಹಲಿ: ಗೋ ರಕ್ಷಕರಿಗೆ ಕೇಂದ್ರ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿದೆ. ಗೋ ರಕ್ಷಣೆ ಹೆಸರಿನಲ್ಲಿ ದೇಶಾದ್ಯಂತ ಗಲಭೆ, ಹಿಂಸೆ, ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ವಿಶ್ವ ಹಿಂದೂ ಪರಿಷದ್, ಬಜರಂಗ ದಳ ಮತ್ತು ಗೋ ರಕ್ಷಣೆ  ಸಂಘಟನೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಲೋಕಸಭೆಯಲ್ಲಿಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. 
ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹತ್ಯೆ, ಗುಂಪು ಗಲಭೆ, ಹಿಂಸಾಚಾರಗಳು ದೇಶದಲ್ಲಿ ಹೆಚ್ಚಾಗಿವೆ. ಹಲವು ರಾಜ್ಯಗಳಲ್ಲಿ ಜನರ ಜೀವಕ್ಕೆ ಭೀತಿಯಿದೆ. ಇವುಗಳಿಗೆ ಹತೋಟಿಯಿಲ್ಲದಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ತೊಬ್ಬರು ಬಲಿಯಾಗುತ್ತಿದ್ದಾರೆ. ಕಾನೂನನ್ನು ತಮ್ಮ ಇಚ್ಛೆಯಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದರು.
ಗುಜರಾತ್, ಜಾರ್ಖಂಡ್, ಉತ್ತರ ಪ್ರದೇಶ, ಮೊದಲಾದ ಕಡೆಗಳಲ್ಲಿ ಗೋ ಹತ್ಯೆ ಹೆಸರಿನಲ್ಲಿ ಜನರ ಹತ್ಯೆಗಳಾಗಿದ್ದು ಎಲ್ಲೆಲ್ಲಿ ಬಿಜೆಪಿ ಸರ್ಕಾರಗಳಿವೆಯೋ ಅಲ್ಲೆಲ್ಲಾ ಗಲಭೆ, ಹಿಂಸಾಚಾರಗಳು ಹೆಚ್ಚಾಗಿವೆ. ಇದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಜನತಾ ಪಾರ್ಟಿಯ ಸಂಸದ ನಿಶ್ಕಾಂತ್ ದುಬೆ, ಖರ್ಗೆಯವರು ಹೆಸರಿಸಿದ ಹಲವು ಕೇಸುಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅದನ್ನು ಸಂಸತ್ತಿನಲ್ಲಿ ಏಕೆ ಹೇಳುತ್ತಾರೆ. ಅವುಗಳ ಬಗ್ಗೆ ಅವರು ಇಲ್ಲಿ ಮಾತನಾಡಬಾರದು ಎಂದರು.
ಬಲ್ಲಬ್ಹಗರ್ ರೈಲಿನಲ್ಲಿ ಜುನೈದ್ ಖಾನ್ ಎಂಬ ವ್ಯಕ್ತಿ ಬ್ಯಾಗ್ ನಲ್ಲಿ ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದ ಎಂಬ ಕಾರಣಕ್ಕೆ ಗೋ ರಕ್ಷಕರೆಂದು ಕರೆಸಿಕೊಂಡವರು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಂದರು. ಆತ ರೈಲಿನಲ್ಲಿ ದೆಹಲಿಗೆ ಈದ್ ಮಿಲಾದ್ ಹಬ್ಬದ ಆಚರಣೆಗೆ ಸಾಮಾನು ಕೊಳ್ಳಲು ಹೋಗಿದ್ದ. ಆದರೆ ಆತನನ್ನು ಹತ್ಯೆ ಮಾಡಲಾಯಿತು. ಈ ಬಗ್ಗೆ ಸರ್ಕಾರ ಮೌನವಾಗಿ ಕುಳಿತಿದೆ. ಕಾನೂನನ್ನು ಎಲ್ಲರೂ ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಹಿಂಸಾಚಾರ ಮಾಡುವ ಗೋ ರಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಇಲ್ಲಿಯವರೆಗೆ ಗಲಭೆ, ಹಿಂಸೆ ಮಾಡಿದ ಎಷ್ಟು ಮಂದಿಯನ್ನು ಬಂಧಿಸಿದೆ? ಅವರ ವಿರುದ್ಧ ಏನು ಕಾನೂನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಇಂತಹ ಗೋ ರಕ್ಷಕರಿಗೆ ನಿಯಂತ್ರಣ ಇಲ್ಲದಾಗಿದೆ. ಹೀಗಾಗಿ ಅಂತವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಪಾದಿಸಿದರು.
ಗೋ ರಕ್ಷಣೆ ಹೆಸರಿನಲ್ಲಿ ನಡೆಯುವ ಹತ್ಯೆಗಳ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದರು. 
ಅದಕ್ಕೆ ಬಿಜೆಪಿ ನಾಯಕ ಹುಕ್ಮ್ ದೇವ್ ನಾರಾಯಣ್ ಉತ್ತರಿಸಿ, ಗೋ ರಕ್ಷಣೆ ಹೆಸರಿನಲ್ಲಿ ಜನರ ಹತ್ಯೆಯನ್ನು ಪ್ರಧಾನಿ ಮೋದಿಯವರು ಖಂಡಿಸುತ್ತಲೇ ಬಂದಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು, ಕಾನೂನು, ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಕೆಲಸ. ಕೇಂದ್ರ ಅರೆ ಸೇನಾಪಡೆಯನ್ನು ತಾನಾಗಿಯೇ ಕಳುಹಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT